ಹುಬ್ಬಳ್ಳಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ 7,748 ಕೋಟಿ ರೂ. ಅನುದಾನ ನೀಡಲಾಗಿದೆ. ಇದು 2009–14ರ ಅವಧಿಗೆ ಹೋಲಿಸಿದರೆ ಸುಮಾರು 9 ಪಟ್ಟು ಹೆಚ್ಚಿನ ಅನುದಾನವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2009–14ರ ಅವಧಿಯಲ್ಲಿ ನೈಋತ್ಯ ರೈಲ್ವೆಗೆ ಕೇವಲ 835 ಕೋಟಿ ರೂ. ಅನುದಾನ ನೀಡಲಾಗಿತ್ತು. 2025–26ರ ಸಾಲಿಗೆ 7,564 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಬಾರಿ ಕಳೆದ ಸಾಲಿನ ಹೋಲಿಕೆಯಲ್ಲಿ ಶೇ. 2.37ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದರು.
ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು–ಚೆನ್ನೈ ಮತ್ತು ಬೆಂಗಳೂರು–ಹೈದರಾಬಾದ್ ಬುಲೆಟ್ ಟ್ರೈನ್ ಕಾರಿಡಾರ್‌ಗಳು ಬೆಂಗಳೂರಿನ ಜನರಿಗೆ ಮಹತ್ವದ ಬದಲಾವಣೆ ತರುವ ಯೋಜನೆಗಳಾಗಿವೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆ ಹೆಚ್ಚುವರಿ ಮಹಾಪ್ರಬಂಧಕ (ಎಜಿಎಂ) ಪಿ. ಅನಂತ್ ಅವರು 2026–27ರ ರೈಲ್ವೆ ಬಜೆಟ್‌ನ ಪ್ರಮುಖ ಅಂಶಗಳ ಕುರಿತು ಮಾಹಿತಿ ನೀಡಿದರು.



