ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಸಂಸ್ಥೆಯ ಚೇರಮನ್ ಎಸ್. ರವಿ ಅವರ 60ನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಮೆಡಿಕಲ್ ಆಫೀಸರ್ ಡಾ. ರಾಜಶೇಖರ ಪವಾರಶೆಟ್ಟರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸಿ ಶ್ರೇಷ್ಠನಾಗುತ್ತಾನೆ. ಮನೆಯಲ್ಲಿನ ಸಮಾರಂಭಗಳಲ್ಲಿ ಆಕರ್ಷಕ ಉಡುಗೊರೆ ನೀಡುವ ಬದಲು ರಕ್ತದಾನ ಮಾಡಿ ಮಾನವೀಯ ಮೌಲ್ಯಗಳನ್ನು ಕುಟುಂಬ ಮತ್ತು ಸಮಾಜದಲ್ಲಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿ, ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಕ್ಕೆ ಬಾಲ ವಿನಾಯಕ ವಿದ್ಯಾನಿಕೇತನ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಶಿಬಿರದಲ್ಲಿ ಎಸ್. ರವಿ ಸೇರಿದಂತೆ 13 ಪಾಲಕರು, 6 ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ 21 ಸಿಬ್ಬಂದಿಗಳು ಸೇರಿದಂತೆ 40 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಇ.ಎಲ್.ಸಿ ಮುಖ್ಯಸ್ಥರಾದ ಮಲ್ಲಿಕಾ ಆರ್., ಶಾಲೆಯ ನಿರ್ದೇಶಕರಾದ ವಿನಾಯಕ್ ಆರ್., ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ, ಐ.ಎಂ.ಎ ಬ್ಲಡ್ ಬ್ಯಾಂಕಿನ ಸಿಬ್ಬಂದಿಗಳಾದ ಮಂಜುನಾಥ ಅಂಗಡಿ, ಅಕ್ಷತಾ ಅಣ್ಣಿಗೇರಿ, ಶರಣು ಹಂಗಾಪೂರಮಠ, ರವಿ ಬಡಿಗೇರ, ಇಸ್ಮಾಯಿಲ್ ಚಿಲಕವಾಡ, ಕಿರಣ ಬೊರಕರ ಅನಿಲ ಭಜಂತ್ರಿ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿನಿ ಸಂಜನಾಗೌಡರ ನಿರೂಪಿಸಿದಳು.