ಬಿಗ್‌ಬಾಸ್ ಕನ್ನಡ ಸೀಸನ್ 12 ಈಗ ಫಿನಾಲೆಯತ್ತ ದೌಡಾಯಿಸುತ್ತಿದ್ದು, ಆಟ ದಿನದಿಂದ ದಿನಕ್ಕೆ ಕ್ರಿಟಿಕಲ್ ಹಂತ ತಲುಪುತ್ತಿದೆ. 100 ದಿನಗಳ ಸನಿಹದಲ್ಲಿರುವ ಶೋದಲ್ಲಿ ಇದೀಗ ಸ್ಪರ್ಧಿಗಳಿಗೆ ಸೆಫ್ಟಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವಾರ ಡಬಲ್ ಎಲಿಮಿನೇಷನ್ ಮೂಲಕ ಮಾಳು ಮತ್ತು ಸೂರಜ್ ಹೊರಬಿದ್ದಿದ್ದರೆ, ಈ ವಾರ ಮತ್ತೊಂದು ಅಚ್ಚರಿಯ ಎಲಿಮಿನೇಷನ್ ನಡೆದಿದೆ. ನಿರಂತರವಾಗಿ ಕೂದಲೆಳೆಯಲ್ಲಿ ಪಾರಾಗುತ್ತಿದ್ದ ಸ್ಪಂದನಾ ಸೋಮಣ್ಣ ಈ ಬಾರಿ ಬಿಗ್‌ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
ಪ್ರತಿ ವಾರ ಎಲಿಮಿನೇಷನ್‌ನ ಕೊನೆಯ ಹಂತದವರೆಗೂ ಹೋಗಿ ಸೇಫ್ ಆಗುತ್ತಿದ್ದ ಸ್ಪಂದನಾ, ಈ ಬಾರಿ ಮತಗಳ ಕೊರತೆಯಿಂದ ಹೊರಹೋಗಿದ್ದಾರೆ ಎನ್ನಲಾಗುತ್ತಿದೆ. ಹಲವು ವಾರಗಳಿಂದಲೇ ಮನೆ ಸದಸ್ಯರು ಸ್ಪಂದನಾರನ್ನು ವೀಕ್ ಸ್ಪರ್ಧಿ ಎಂದು ಪರಿಗಣಿಸಿದ್ದರು.
ಈ ವಾರ ಸ್ಪಂದನಾ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಹಾಗೂ ಧನುಶ್ ನಾಮಿನೇಷನ್ ಪಟ್ಟಿಯಲ್ಲಿದ್ದರು. ಸ್ಪಂದನಾ ಅಡುಗೆ ಮಾಡೋದಿಲ್ಲ, ಟಾಸ್ಕ್ ಆಡೋದಿಲ್ಲ, ತಂಡದ ಆಟದಲ್ಲಿ ಕಾಣಿಸಿಕೊಳ್ಳೋದಿಲ್ಲ ಎಂಬ ಆರೋಪಗಳು ಮನೆಯೊಳಗೇ ಕೇಳಿಬಂದಿದ್ದವು.
ಕಾವ್ಯ ಶೈವ ಮತ್ತು ಧನುಶ್ ಗೌಡ ಸ್ಪಂದನಾ ಉಳಿದುಕೊಂಡಿದ್ದ ವಿಚಾರವನ್ನು ಹಾಸ್ಯವಾಗಿ ಎತ್ತಿ ಹಿಡಿದಿದ್ದರು. ಅದನ್ನೇ ಕೇಳಿ ಸ್ಪಂದನಾ ಕೂಡ ನಗುವ ಮೂಲಕ ಪ್ರತಿಕ್ರಿಯಿಸಿದ್ದರು. ಆದರೆ, ಈ ವಾರ ಆ ನಗು ಉಳಿದಿಲ್ಲ.
ಮೈಸೂರಿನವರಾದ ಸ್ಪಂದನಾ ಸೋಮಣ್ಣ, ‘ದಿಲ್ ಖುಷ್’, ‘ಮರೀಚಿ’ ಸಿನಿಮಾಗಳು ಹಾಗೂ ‘ಕರಿಮಣಿ’ ಧಾರಾವಾಹಿಯ ಮೂಲಕ ಪರಿಚಿತರಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿನ ಅವರ ಪಯಣ ಹೆಚ್ಚು ಸದ್ದು ಮಾಡದೆ ಅಂತ್ಯಗೊಂಡಿದೆ.
ಇನ್ನೆರಡು ವಾರಗಳಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆ ತಲುಪಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಕಿಂಗ್ ಎಲಿಮಿನೇಷನ್‌ಗಳು ನಡೆಯುವ ಸಾಧ್ಯತೆ ಇದೆ.



