ಸೋಲಿಗೆ ಪರಾಮರ್ಶೆ ಅನಗತ್ಯ : ಜಿ.ಎಸ್. ಗಡ್ಡದೇವರಮಠ

0
Speaking to the media at his residence G.S. Gaddadevar Math
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಚುನಾವಣೆಯಲ್ಲಿ ನನ್ನ ಪುತ್ರ ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸೆಣಸಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದು ಮತದಾರರ ತೀರ್ಮಾನವನ್ನು ಶಿರಸಾವಹಿಸಿ ಸ್ವೀಕರಿಸುತ್ತೇವೆ ಮತ್ತು ಅವರ ಚುನಾವಣೆಯ ಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಹೇಳಿದರು.

Advertisement

ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾವೇರಿ-ಗದಗ ಕ್ಷೇತ್ರ ತುಂಬಾ ವಿಶಾಲವಾದ ಕ್ಷೇತ್ರವಾಗಿದ್ದು, ಇಡೀ ಕ್ಷೇತ್ರವನ್ನು ಸುತ್ತಿ ಎಲ್ಲ ಮತದಾರರನ್ನು ಭೇಟಿಯಾಗಿ ಅವರ ಹೃದಯ ಗೆಲ್ಲುವ ಕೆಲಸ ಮಾಡಿದ್ದೇವೆ. ಎಲ್ಲ ಕಡೆ ಜನರು ನೀಡಿದ ಪ್ರೀತಿ, ವಿಶ್ವಾಸ ಹಾಗೂ ಸ್ವಾಗತ ನಿಜಕ್ಕೂ ಸ್ಮರಣಾರ್ಹವಾದ ಸಂಗತಿಯಾಗಿದೆ. ಸೋಲಿಗೆ ಯಾರನ್ನೂ ದೂಷಿಸುವದಿಲ್ಲ, ಸೋಲಿಗೆ ಪರಾಮರ್ಶೆಯೂ ಅನಗತ್ಯ. ಮತದಾರರು ನೀಡಿದ ತೀರ್ಪನ್ನು ಪ್ರಾಮಾಣಿಕವಾಗಿ ಸ್ವೀಕರಿಸುತ್ತೇವೆ ಎಂದರು.

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನಿಭಾಯಿಸುವ ಎಲ್ಲ ಸಾಮರ್ಥ್ಯವನ್ನು ಆನಂದಸ್ವಾಮಿ ಹೊಂದಿದ್ದಾರೆ. ಆತನ ಸಂಘಟನಾ ಶಕ್ತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದ್ದು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಎಲ್ಲ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಶ್ರಮವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗೋಣ, ಕಾರ್ಯಕರ್ತರು ಧೈರ್ಯಗುಂದುವದು ಬೇಡ ಎಂದ ಅವರ ಮಾತಿನಲ್ಲಿ ರಾಜಕೀಯ ಕೊಂಚ ಬೇಸರ ತರಿಸಿರುವ ಭಾವವಿತ್ತು.


Spread the love

LEAVE A REPLY

Please enter your comment!
Please enter your name here