ಮೊಹರಂ ಇಸ್ಲಾಮಿನ ಹೊಸ ವರ್ಷದ ಹೊಸ ತಿಂಗಳು ಎಂಬ ನೆಲೆಯಲ್ಲಿ ಹಿಂದಿನಿಂದಲೂ ಗೌರವ ಪಡೆದಿದೆ. ಮೊಹರಂ ತಿಂಗಳ 10 ಎಂಬುದು ದೇವ ಪ್ರವಾದಿ ಹಝ್ರತ್ ಮೂಸಾ ಮತ್ತು ಬನೀ ಇಸ್ರಾಈಲ್ ಜನಾಂಗಕ್ಕೆ ಅಲ್ಲಾಹನು ರಾಜಾ ಫರೋವನ ದಬ್ಬಾಳಿಕೆಯಿಂದ ಮುಕ್ತಿ ದೊರಕಿಸಿದ ದಿನವಾಗಿತ್ತು. ಅದರಿಂದಾಗಿಯೇ ಯಹೂದಿಯರು ಅಂದು ಉಪವಾಸ ಆಚರಿಸುತ್ತಿದ್ದರು. ಪ್ರವಾದಿ ಮುಹಮ್ಮದ್ ಕೂಡಾ ಅಂದು ಉಪವಾಸ ಇರುತ್ತಿದ್ದರು. ಮಾತ್ರವಲ್ಲ ಮೊಹರಂ 10ರಂದು ಉಪವಾಸ ಇರುವಂತೆ ತಮ್ಮ ಜನರಿಗೂ ಆದೇಶಿಸಿದ್ದರು.
ಈಗ ಮುಸಲ್ಮಾನರು ಎರಡು ದಿನ ಉಪವಾಸ ಆಚರಿಸುತ್ತಾರೆ. ಮೊಹರಂ 10 ಕ್ರೂರಿ ದೊರೆ ಫರೋವನ ದಬ್ಬಾಳಿಕೆಯಿಂದ ಮುಕ್ತಿ ದೊರಕಿಸಿದ ಸಂತೋಷದಲ್ಲಿ ಕೃತಜ್ಞತೆಯ ರೂಪದಲ್ಲಿ ಉಪವಾಸದ ಮೂಲಕ ಆಚರಿಸಲ್ಪಡುತ್ತದೆ. ಅಲ್ಲದೆ ಪ್ರವಾದಿ ಮುಹಮ್ಮದರು ಮಕ್ಕಾ ಬಿಟ್ಟು ಮದೀನಾಕ್ಕೆ ಹಿಜ್ರತ್ ಹೋದ ದಿನದಿಂದ ಇಸ್ಲಾಮೀ ಸಂವತ್ಸರದ ಪ್ರಥಮ ತಿಂಗಳೆಂದು ಪರಿಗಣಿಸಲ್ಪಟ್ಟಿದೆ.
ಇಸ್ಲಾಮ ಎಂಬುದು ಒಂದು ಸಮಗ್ರ ಜೀವನ ವ್ಯವಸ್ಥೆ. ಮಾನವ ಜೀವನಕ್ಕೆ ಸಂಬಂಧಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಸರ್ವ ರಂಗಗಳಿಗೂ ಅದು ಮಾರ್ಗದರ್ಶನ ಮಾಡುತ್ತದೆ. ಅದರ ಅಡಿಯಲ್ಲಿ ಒಂದು ಸುಂದರ, ಸುಭಿಕ್ಷ, ಮಾದರಿ ಸಮಾಜ ನಿರ್ಮಿಸಲು ನಿಯುಕ್ತರಾದ ಕೊನೆಯ ಪ್ರವಾದಿಗಳೇ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಂ. ಪ್ರವಾದಿ ಮುಹಮ್ಮದ್ ಅವರು ತಮ್ಮ ಸಮಾಜದಲ್ಲಿನ ಮಾನವ ರೂಪದ ದಾನವ ಸ್ವರೂಪಿಗಳನ್ನು ಆಮೂಲಾಗ್ರವಾಗಿ ಬದಲಾಯಿಸಿದವರಾಗಿದ್ದರು. ಅವರ ಬದುಕಿನ ಸಕಲ ರಂಗಗಳನ್ನು ದೇವಭಯದ ನೀರಿನಿಂದ ಸಂಪೂರ್ಣ ಶುದ್ಧಗೊಳಿಸಿದವರಾಗಿದ್ದರು. ಅವರೆಲ್ಲರ ವಿಶ್ವಾಸವನ್ನು, ಚಾರಿತ್ರ‍್ಯವನ್ನು, ಮನಸ್ಸನ್ನು ಸುಧಾರಿಸಿ ಅವರನ್ನು ಏಕದಾರದಲ್ಲಿ ಪೋಣಿಸಿದ ಅಮೂಲ್ಯ ಹಾರವನ್ನಾಗಿಸಿದರು.
ಪ್ರವಾದಿ ಅವರ ಕಾಲಾನಂತರ ಸಚ್ಚರಿತ ಖಲೀಫರು ದೈವಿಕ ಮಾರ್ಗದರ್ಶನದಂತೆ ಅದೇ ಇಸ್ಲಾಮಿ ಆಡಳಿತವನ್ನು ಸರಿಯಾಗಿ ಮುನ್ನೆಡೆಸಿಕೊಂಡು ಹೋದರು. ನಾಲ್ಕನೇ ಇಸ್ಲಾಮೀ ಆಡಳಿತಗಾರ (ಖಲೀಫ)ರಾದ ಹಝ್ರತ್ ಅಲೀ ಅವರ ನಿಧನದ ನಂತರ ಈ ವ್ಯವಸ್ಥೆ ಸ್ವಲ್ಪ ಸಡಿಲಾಯಿತು. ಆದರೂ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಖಲೀಫ ಹಝ್ರತ್ ಅಮೀರ್ ಮುಅವಿಯಾ ಅವರ ಬಳಿಕ ಖಲಾಪತ್ ವ್ಯವಸ್ಥೆಗೆ ಅಪಾಯ ಬಂದಿತು. ಖಿಲಾಫತ್ ವ್ಯವಸ್ಥೆ ಎಂಬುದು ಪ್ರಜಾಪ್ರಭುತ್ವ ಮಾದರಿಯಲ್ಲಿದ್ದು, ಪ್ರಜೆಗಳಿಂದಲೇ ಆಡಳಿತಗಾರರನ್ನು ಆರಿಸಲಾಗುತ್ತದೆ. ಪ್ರಜೇಗಳೇ ತಮ್ಮೊಳಗಿನಿಂದ ಅತ್ಯುತ್ತಮ ವ್ಯಕ್ತಿಯನ್ನು ಆರಿಸಿ ಖಲೀಫರನ್ನಾಗಿ ಮಾಡುತ್ತಾರೆ. ರಾಜಾಳಿತ, ವಂಶಾವಡಳಿತ, ಪಾಳೆಗಾರಿಕೆ, ಮತ್ತು ಸರ್ವಾಧಿಕಾರದಿಂದ ಸಂಪೂರ್ಣ ಮುಕ್ತವಾದ ವ್ಯವಸ್ಥೆಯದು.
ನಾಯಕ ಮುಆವಿಯ ಅವರ ನಂತರ ಪ್ರಜಾಪ್ರಭುತ್ವ ರೀತಿಗೆ ವಿರುದ್ಧವಾಗಿ ಅವರ ಪುತ್ರ ಯಝೀದ ಆಡಳಿತಗಾರನಾಗಲು ಹೊರಟಿದ್ದೇ ಈ ಎಲ್ಲ ಗಂಡಾಂತರಕ್ಕೆ ಕಾರಣವಾಗಿತ್ತು. ಯಝೀದ್ ಅವರ ಸ್ವನಿರ್ಣಯಕ್ಕೆ ಪ್ರವಾದಿವರ್ಯರ ಮೊಮ್ಮಗ ಹಝ್ರತ್ ಹುಸೈನ್ ಇಬ್ನ್ ಅಲಿ, ಹಿರಿಯ ಸಹಾಬಿಗಳಾದ ಅಬ್ದುಲ್ಲಾ ಬಿನ್ ಉಮರ್, ಅಬ್ದುಲ್ಲಾ ಬಿನ್ ಝಬೈರ್, ಅಬ್ದರ‍್ರಹ್ಮಾನ್ ಬಿನ್ ಅಬೂಬಕರ್ ಮುಂತಾದವರು ವಿರೋಧ ವ್ಯಕ್ತಪಡಿಸಿದರು.
ಪ್ರವಾದಿ ಕಟ್ಟಿ ಬೆಳಿಸಿದ ಆಡಳಿತದ ರೀತಿಯಲ್ಲಿ ಪ್ರವಾದಿ ತೋರಿದ ಹಾದಿಯಲ್ಲಿ ಖಿಲಾಫತ್ ವ್ಯವಸ್ಥೆ ಮುಂದುವರಿಯಬೇಕು ಎಂದು ಕೆಲವು ಹಿರಿಯ ಸಹಾಬಿಗಳ ಪ್ರಯತ್ನ. ಇದರ ನಡುವೆ ಕೂಫಾ ಪ್ರದೇಶದವರು ತನಗೆ ಬೆಂಬಲ ಕೊಡಲು ಸಿದ್ದರಿದ್ದಾರೆ ಎಂದು ತಿಳಿದ ಹಝ್ರತ್ ಹುಸೈನ್, ಆ ಕಡೆಗೆ ಪ್ರಯಾಣ ಬೆಳೆಸಿದರು.
ಆದರೆ ಗುರಿಯನ್ನು ಮುಟ್ಟುವ ಮೊದಲೇ ಯಝೀದ್ ಅವರ ದಂಡನಾಯಕ ಇಬ್ರೆ ಝಿಯಾದ್‌ನ ಸೇನೆಯು ಅವರನ್ನು ಸುತ್ತುವರಿಯಿತು. ಹುಸೈನ್ ಅವರ ಜತೆಗೆ ನಿಶ್ಯಸ್ತçರಾದ ಕೆಲವೇ ಮಂದಿ, ದೂರ ಪ್ರಯಾಣದ ಆಯಾಸ, ಹಸಿವು, ಬಾರಿಕೆ ಬೇರೆ, ಯಝೀದ್‌ರೊಂದಿಗೆ ವಿಧೇಯತೆಯ ಕರಾರು ಮಾಡುವಂತೆ ಇಬ್ನ್ ಝಿಯಾದನ ಒತ್ತಾಯ. ಆದರೆ ಹುಸೈನ್ ತಮ್ಮ ನಿಧಾರದಲ್ಲೇ ಅಚಲರಾದರು. ಕರ್ಬಲಾದ ರಣಬಿಸಿಲಿಗೆ ಇಬ್ನ್ ಝೀಯಾದ್ನ ಕೋಪ ನೆತ್ತಿಗೇರಿತು. ಆ ಸೇನೆಯ ಖಡ್ಗಗಳ ನೆತ್ತರ ದಾಹಕ್ಕೆ ಹುಸೈನ್ ಮತ್ತವರ ಕುಟುಂಬದ ರುಂಡಗಳು ಚೆಂಡಾಡಲ್ಪಟ್ಟವು. ಜನಹಿತ ಸಮಾಜ ಮಾನವ ಕುಲ ಕಲ್ಯಾಣ ವ್ಯವಸ್ಥೆಯೊಂದರ ರಕ್ಷಣೆಗಾಗಿ ಹೆಣಗಾಡುತ್ತ ವೀರ ಕಲಿಯೊಂದು ಈ ಲೋಕಕ್ಕೆ ವಿದಾಯ ಕೋರಿತು.
ಇತಿಹಾಸದಲ್ಲಿ ಐತಿಹಾಸಿಕ ಘಟನೆಗಳ ಸಾಕ್ಷಿಯಾಗಿ ನಿಲ್ಲವಂತ ಪ್ರಮುಖ ಘಟ್ಟಗಳಲ್ಲಿ ಪ್ರವಾದಿ ಆದಮರ ಪಶ್ಚಾತ್ತಾಪವನ್ನು ಅಲ್ಲಾಹನು ಸ್ವೀಕರಿಸಿದ್ದು, ಪ್ರವಾದಿ ನೂಹರ ಹಡಗು ಚಂಡಮಾರುತದಿಂದ ಪಾರಾಗಿ ಜೂದೀಬೆಟ್ಟದ ಮೇಲೆ ತಂಗಿದ್ದು, ಪ್ರವಾದಿ ಯೂನುಸ್ ಮೀನಿನ ಹೊಟ್ಟೆಯಿಂದ ಹೊರಬಂದದ್ದು. ಪ್ರವದಿ ಇಬ್ರಾಹೀಮ್ ನಮ್ರೂದನ ಬೆಂಕಿಯಿಂದ ಸುರಕ್ಷಿತವಾಗಿ ಪಾರಾಗಿ ಬಂದದ್ದು. ಪ್ರವಾದಿ ಮೂಸಾ ಅವರ ಬನೀ ಇಸ್ರಾಈಲ್ ಜನಾಂಗವು ಫಿರಔನ್‌ನಿಂದ ಮುಕ್ತಿ ಪಡೆದದ್ದು, ಹಝ್‌ತ್ ಹುಸೈನರ ಹುತಾತ್ಮರಾದುದು.
ಇತಿಹಾಸದಲ್ಲಿ ಮೊಹರಂ ತಿಂಗಳು ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದೆ. ಮೊಹರಂ ಎಂಬುದು ಸಂತೋಷ ಸಂಭ್ರಮದಲ್ಲಿ ಮಿತಿಮೀರಿ ನಮ್ಮನ್ನೇ ನಾವು ಮರೆಯುವ ಮಾಸವಲ್ಲ. ಶೋಕಾಚರಣೆಯಲ್ಲಿ ತೊಡಗಿ ಅತಿರೇಕ ಎಸಗಿಕೊಳ್ಳುವ ತಿಂಗಳೂ ಅಲ್ಲ, ಸಮತೋಲನ ಮತ್ತು ಸಮಚಿತ್ತದೊಂದಿಗೆ ಅರಿತು ಮುನ್ನಡೆಯಲು ಮೊಹರಂ ಪ್ರೇರಕ ಶಕ್ತಿಯಾಗಿದೆ.
– ಡಾ. ತಯಬಅಲಿ ಅ.ಹೊಂಬಳ.
ಗದಗ.
Advertisement