ಗದಗ-ಬೆಟಗೇರಿ ನಗರಸಭೆ: ನೀರು ಪೂರೈಕೆಗೆ ವಿಶೇಷ ಅನುದಾನ ಮೀಸಲು

0
nagarasabhe
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರಸಭೆ ಸಭಾಭವನದಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಬಜೆಟ್ ಮಂಡನೆಯಲ್ಲಿ ನಗರಸಭಾಧ್ಯಕ್ಷೆ ಉಷಾ ದಾಸರ ಸತತ 3ನೇ ಬಾರಿಗೆ ಆಯ-ವ್ಯಯ ಮಂಡಿಸಿದರು. ಆರಂಭದ ಶಿಲ್ಕು 46.25 ಕೋಟಿ ರೂ. ಸೇರಿದಂತೆ ಒಟ್ಟು 198.44 ಕೋಟಿ ರೂ. ಜಮಾ ಹಾಗೂ 195.40 ಕೋಟಿ ರೂ. ವೆಚ್ಚ ಕಳೆದು, 3.04 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾದರು.

Advertisement

ಸಭೆ ಆರಂಭಕ್ಕೂ ಮುನ್ನ ಆಡಳಿತ ಪಕ್ಷದ ಸದಸ್ಯ ಚಂದ್ರು ತಡಸದ ಮಾತನಾಡಿ, ಅವಳಿ ನಗರದಲ್ಲಿ ನೀರಿನ ಸಮಸ್ಯೆ ಆತಂಕ ಮೂಡಿಸುತ್ತಿದೆ. ಪೌರಾಯುಕ್ತರು, ಅಧಿಕಾರಿಗಳು ನಗರಸಭೆ ಸದಸ್ಯರ ಕೆಲಸ-ಕಾರ್ಯಗಳಿಗೆ ಅನುಮೋದನೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ದನಿಗೂಡಿಸಿದರು. ಅವಳಿ ನಗರದ 35 ವಾರ್ಡ್ಗಳಲ್ಲಿಯೂ ನೀರಿನ ಸಮಸ್ಯೆಯಿದೆ. ಪ್ರತಿ ವಾರ್ಡಿನ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕವಾಗಿ 5 ಲಕ್ಷ ರೂ. ಮೀಸಲಿಡಬೇಕು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಟೆಂಡರ್ ಕರೆದು, ವರ್ಕ್ ಆರ್ಡರ್ ನೀಡಬೇಕು. ಕೆಲಸ ಪೂರ್ಣಗೊಳಿಸಿದ ನಂತರ ಬಿಲ್ ಬಿಡುಗಡೆ ಮಾಡಬೇಕು ಎಂದು ಪಟ್ಟುಹಿಡಿದರು.

ಈ ವಿಷಯವಾಗಿ ಪ್ರತಿಪಕ್ಷದ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಗಂಭೀರ ಚರ್ಚೆ ನಡೆದು, ಅಂತಿಮವಾಗಿ ವಾರ್ಡ್ವಾರು 5 ಲಕ್ಷ ರೂ. ಮೀಸಲಿಡುವಂತೆ ಉಷಾ ದಾಸರ ಅವರು ಪೌರಾಯುಕ್ತರಿಗೆ ಸೂಚಿಸಿದರು.

ಅವಳಿ ನಗರದ ನಿರಂತರ ಕುಡಿಯುವ ನೀರಿನ ಯೋಜನೆ ಸುಧಾರಣೆಗೆ ಅಮೃತ ನಗರೋತ್ಥಾನ 4ನೇ ಹಂತವಾಗಿ 40 ಕೋಟಿ ರೂ. ಬಿಡುಗಡೆಯಾಗಿದ್ದು, ತಿಂಗಳಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು. ಜೊತೆಗೆ ನಗರಸಭೆ ಅನುದಾನದಲ್ಲಿ 4.74 ಕೋಟಿ ರೂ., ಯಂತ್ರೋಪಕರಣಗಳ ಖರೀದಿಗಾಗಿ 14.65 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ ಎಂದು ಉಷಾ ದಾಸರ ಘೋಷಿಸಿದರು.

budget

ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಮಕ್ಕಳ ಶ್ರೇಯೋಭಿವೃದ್ಧಿಗೆ 5 ಲಕ್ಷ ರೂ. ವಂತಿಗೆ ನೀಡಲಾಗುವುದು ಎಂದು ಉಷಾ ದಾಸರ ಘೋಷಣೆ ಮಾಡಿದರು.

ಆಯ-ವ್ಯಯ ಮಂಡನಾ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಪೌರಾಯುಕ್ತ ಮಾರುತಿ ಬ್ಯಾಕೋಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಕೃಷ್ಣಾ ಪರಾಪುರ ಸಹಿತ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಡಿಸಲಾದ ಪ್ರಮುಖ ಘೋಷಣೆಗಳು

* ಹೊಸ ರಸ್ತೆ ನಿರ್ಮಾಣಕ್ಕೆ 14.96 ಕೋಟಿ ರೂ.
* ರಸ್ತೆ ದುರಸ್ತಿಗಾಗಿ 75 ಲಕ್ಷ ರೂ.
* ಚರಂಡಿ ನಿರ್ವಹಣೆಗೆ 1.11 ಕೋಟಿ ರೂ.
* ಹೊಸ ಚರಂಡಿ ನಿರ್ಮಾಣಕ್ಕೆ 4.93 ಕೋಟಿ ರೂ.
* ಬೀದಿ ದೀಪ ನಿರ್ವಹಣೆಗೆ 1.50 ಕೋಟಿ ರೂ.
* ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ 1.63 ಕೋಟಿ ರೂ.
* ತ್ಯಾಜ್ಯ ವಿಲೇವಾರಿಗೆ 5.40 ಕೋಟಿ ರೂ.
* ಘನತ್ಯಾಜ್ಯ ನಿರ್ವಹಣೆ 2.13 ಕೋಟಿ ರೂ.
* ಒಳಚರಂಡಿ ನಿರ್ವಹಣೆ, ನಿರ್ಮಾಣಕ್ಕೆ 1.17 ಕೋಟಿ ರೂ.
* ಸ್ಮಶಾನ ಅಭಿವೃದ್ಧಿಗೆ 1.11 ಕೋಟಿ ರೂ.

ನಗರಸಭೆ ಬಜೆಟ್ ಮಂಡನೆ ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತ ಆಹ್ವಾನ ನೀಡದಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡೆಗೆ ಮಾಧ್ಯಮ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ ಸಭೆಯ ಕುರಿತು ಸಾರ್ವಜನಿಕರಿಗೂ ಮಾಹಿತಿ ನೀಡದೆ ತರಾತುರಿಯಲ್ಲಿ ಆಯ-ವ್ಯಯ ಮಂಡಿಸಿರುವುದು ಅನುಮಾನಕ್ಕೂ ಕಾರಣವಾಯಿತು.

ಮಂಡನೆಯಾದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಎಲ್.ಡಿ. ಚಂದಾವರಿ, ಇದೊಂದು ದಲಿತ, ಹಿಂದುಳಿದ ವರ್ಗದ ವಿರೋಧಿ ಬಜೆಟ್ ಆಗಿದೆ. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಎಸ್‌ಸಿ ಸಮುದಾಯಕ್ಕೆ ಸೇರಿದ ನಾವೇ ಆಯಾ ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡದಿದ್ದರೆ ಹೇಗೆ ಎಂದು ನಗರಸಭೆ ಅಧ್ಯಕ್ಷರನ್ನು ಪ್ರಶ್ನಿಸಿದರು.

ಬಜೆಟ್‌ನಲ್ಲಿ ಮಂಡಿಸಿದ ಕಾರ್ಯಕ್ರಮಗಳೆಲ್ಲವೂ ಕಾರ್ಯರೂಪಕ್ಕೆ ಬರಬೇಕು. ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮಗಳೆಲ್ಲವೂ ಎಷ್ಟು ಜಾರಿಯಾಗಿವೆ ಎನ್ನುವ ಕುರಿತು ಮಾಹಿತಿ ನೀಡಬೇಕು. ಬೀದಿ ದೀಪ ನಿರ್ವಹಣೆ, ವಾಹನ ರಿಪೇರಿ, ಕಚೇರಿ ನಿರ್ವಹಣೆ ಹೆಸರಿನಲ್ಲಿ ಕೋಟ್ಯಾಂತರ ರೂ. ಸೋರಿಕೆಯಾಗುತ್ತಿದೆ.
– ಕೃಷ್ಣಾ ಪರಾಪುರ.
ನಗರಸಭೆ ಸದಸ್ಯ.


Spread the love

LEAVE A REPLY

Please enter your comment!
Please enter your name here