ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಗದಗ ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯದ ನಂತರ ಬರುವ ಗಣೇಶ ಚತುರ್ಥಿಯ 5ನೇ ದಿನವಾದ ಅಷ್ಟಮಿಯಂದು ಬರುವ ಹಬ್ಬ ಜೋಕುಮಾರ ಸ್ವಾಮಿಯ ಹಬ್ಬ.
ಇದು ಗ್ರಾಮಿಣ ಭಾಗದ ಹಳ್ಳಿಗಳ ಸೊಗಡಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. 7 ದಿನಗಳ ಕಾಲ ಆಚರಣೆ ಮಾಡುವ ಜೋಕುಮಾರ ಸ್ವಾಮಿಯ ಹಬ್ಬದಲ್ಲಿ ಅನೇಕ ಜನಪದ ಹಾಡುಗಳು ಹಾಡುತ್ತಾ ಕಾಲ ಕಳೆಯುವದೇ ಚಂದ. ಗಣೇಶ ಚತುರ್ಥಿಯ 5 ದಿನ ಈ ಜೋಕುಮಾರ ಸ್ವಾಮಿ ಕುಂಬಾರನ ಮನೆಯಲ್ಲಿ ಹುಟ್ಟುತ್ತಾನೆ. ನಂತರ ಅಂಬಿಗರ ಮನೆಯಲ್ಲಿ ಬೆಳೆಯುತ್ತಾನೆ. ನಂತರ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ತಪ್ಪಲಿನಿಂದ ಆತನನ್ನು ಅಲಂಕರಿಸಿ ಮೂರ್ತಿಗೆ ಕಪ್ಪು ಬಣ್ಣ ಹಚ್ಚಿ ಬಾಯಿಗೆ ಬೆಣ್ಣೆಯನ್ನು ಸವರಿ ಕುಂಚಿಗೆ ಕುಲಾಯಿ ಕಟಿ ವಿಭಿನ್ನವಾಗಿ ಸಿಂಗರಿಸಲಾಗುತ್ತದೆ.
ಗ್ರಾಮದ ದೇವಮ್ಮ ಮರಮಣ್ಣವರ ಹಾಗೂ ಸಂಗಡಿಗರು ಜೊತೆಗೂಡಿ ಜೋಕುಮಾರ ಸ್ವಾಮಿಯ ಬುಟ್ಟಿಯನ್ನು ತೆಲೆಯ ಮೇಲೆ ಹೊತ್ತುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಲ್ಲಲ್ಲಿ ಪ್ರಮುಖ ಸ್ಥಳಗಳಲ್ಲಿ ಜೋಕುಮಾರ ಸ್ವಾಮಿಯನ್ನು ಕುಡಿಸಿ ಅನೇಕ ಜನಪದ ಹಾಡುಗಳನ್ನು ಹಾಡುತ್ತಾರೆ.
ರೈತ ಮಹಿಳೆಯರು ಜೋಕುಮಾರನಿಗೆ ಪೂಜೆ ಮಾಡಿ ತಮ್ಮಲ್ಲಿ ಇದ್ದ ಧವಸ-ಧಾನ್ಯಗಳನ್ನು ನೀಡಿ ಮುಂದಿನ ಹಿಂಗಾರು ಮಳೆ ಸಂಪೂರ್ಣವಾಗಿ, ಬೆಳೆ ಚೆನ್ನಾಗಿ ಬರಲಿ ಎಂದು ಬೇಡಿಕೊಳ್ಳುತ್ತಾರೆ. ಭಕ್ತರಿಗೆ ಬೇವಿನ ಪತ್ರಿ ಹಾಗೂ ಅಂಬಲಿಯನ್ನು ಪ್ರಸಾದವಾಗಿ ನೀಡುತ್ತಾರೆ.
7ನೇ ದಿನ ಹುಣ್ಣಿಮೆಯ ದಿನ ಸಂಜೆ ಜೋಕುಮಾರ ದಲಿತ ಸಮುದಾಯದ ಮಹಿಳೆಯರ ಕೈಗೆ ಸಿಗುತ್ತಾನೆ. ಅವರು ಅಗಸರ ದೋಣಿಯಲ್ಲಿ ಹಾಕಿ ತಲೆಗೆ ಒನಕೆಯಿಂದ ಹೊಡೆದು ಸಾಯಿಸುತ್ತಾರೆ.
ಈ ಆಚರಣೆಯ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಕರುನಾಡಿನ ಜನಪದ ಸಂಸ್ಕೃತಿಯ ವೈಶಿಷ್ಟ್ಯಗಳಲ್ಲಿ ಒಂದಾದ ಜೋಕುಮಾರ ಸ್ವಾಮಿಯ ಪರಂಪರೆಯ ಹಬ್ಬ ಉಳಿಯಬೇಕಾದರೆ ಜೋಕುಮಾರನ ಸೇವೆ ಮಾಡುವ ಬಾರಕೇರ ಮನೆತನದವರಿಗೆ ಸರ್ಕಾರದಿಂದಲೇ ಆರ್ಥಿಕ ಸಹಾಯ ನೀಡಬೇಕು. ಅಂದಾಗ ಮಾತ್ರ ಗ್ರಾಮೀಣ ಭಾಗದ ಇಂತಹ ಸಂಸ್ಕೃತಿಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದರು.