ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಹಾಗೂ ಇತರರಿಗೆ ಮನೆಯಿಂದ ಊಟ ತರಿಸಿಕೊಳ್ಳಲು ನೀಡಿದ್ದ ವಿಶೇಷ ಅನುಮತಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯ ವಾರಕ್ಕೊಮ್ಮೆ ಮನೆ ಊಟಕ್ಕೆ ಅವಕಾಶ ನೀಡಿತ್ತು. ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಹೆಚ್ಚುವರಿ ಅವಕಾಶವೂ ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ನಂತರ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಟ್ರಯಲ್ ಕೋರ್ಟ್ ಆದೇಶವನ್ನು ರದ್ದುಪಡಿಸಿ, ಜೈಲು ನಿಯಮಗಳು ಎಲ್ಲ ಕೈದಿಗಳಿಗೆ ಸಮಾನವಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಪ್ರಕರಣ ಸಂಬಂಧ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಆರೋಪಿಗಳ ಪರ ವಕೀಲರು ತನಿಖಾಧಿಕಾರಿಯನ್ನು ಆರೋಪಿಯನ್ನಾಗಿ ಮಾಡುವ ಅರ್ಜಿಯನ್ನು ವಿರೋಧಿಸಿದ್ದಾರೆ. ಮತ್ತೊಂದೆಡೆ, ಪ್ರತಿದಿನವೂ ವಿಚಾರಣೆ ನಡೆಸುವಂತೆ ಸಲ್ಲಿಸಿದ ಅರ್ಜಿಗೆ ವಿಶೇಷ ಸರ್ಕಾರಿ ಅಭಿಯೋಜಕರು ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ತೀರ್ಪಿನಿಂದ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಮನೆ ಊಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ಪ್ರಕರಣದ ಮುಂದಿನ ವಿಚಾರಣೆ ಮೇಲೆ ಗಮನ ಕೆಂದ್ರೀಕೃತವಾಗಿದೆ.



