ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಅತಿರುದ್ರ ಮಹಾಯಜ್ಞ ಸೇವಾ ಸಮಿತಿಯು ಆಯೋಜಿಸಿರುವ ಅತಿರುದ್ರ ಮಹಾಯಾಗ ಮತ್ತು ಕಿರಿಯ ಕುಂಭಮೇಳದ 2ನೇ ದಿನವಾದ ಬುಧವಾರ ಗದಗಿನ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳ ದರ್ಶನ ಪಡೆದರು.
ನಾಗಾ ಸಾಧು ಶ್ರೀ ಸಹಾದೇವಾನಂದ ಗಿರಿ ಜಿ ಮಹಾರಾಜರ ನೇತೃತ್ವದಲ್ಲಿ ವಿಶೇಷ ಹೋಮ-ಹವನ ಹಾಗೂ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಅತಿರುದ್ರ ಮಹಾಯಜ್ಞದ ಅಂಗವಾಗಿ ಜರುಗಿದ ಪೂಜಾ ಕೈಂಕರ್ಯಗಳಲ್ಲಿ ನೂರಾರು ಸಾಧು-ಸಂತರು ಮತ್ತು ಭಕ್ತರು ಪಾಲ್ಗೊಂಡಿದ್ದರು. ಯಜ್ಞದ ಅಗ್ನಿಕುಂಡದ ಸುತ್ತ ನೆರೆದ ಭಕ್ತರು, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪುನೀತರಾದರು.
ಕಿರಿಯ ಕುಂಭಮೇಳದ ಆವರಣದಲ್ಲಿ ವಿಶೇಷ ಆಕರ್ಷಣೆಯಾಗಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗದ ದರ್ಶನ ಪಡೆಯಲು ಭಕ್ತಾದಿಗಳು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ನಗರದ ಮತ್ತು ಸುತ್ತಮುತ್ತಲಿನ ಸಾವಿರಾರು ಭಕ್ತರು ಶಿವಲಿಂಗದ ದರ್ಶನ ಪಡೆದು ಕೃತಾರ್ಥರಾದರು.
ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದ ಪ್ರಸಾದ ಸೇವೆಯಲ್ಲಿಯೂ ಸಾಮರಸ್ಯ ಕಂಡುಬಂದಿತು. ಕುಂಭಮೇಳಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರು, ವಿದ್ಯಾರ್ಥಿಗಳು ಹಾಗೂ ಸೇವಕರು ಬೆಲ್ಲ-ಬೇಳೆಯ ಪಾಯಸ, ಅನ್ನ-ಸಾಂಬಾರ್ ಪ್ರಸಾದವನ್ನು ಸಂತೃಪ್ತಿಯಿಂದ ಸೇವಿಸಿದರು.
ಕಿರಿಯ ಕುಂಭಮೇಳದಲ್ಲಿ ಮುಸ್ಲಿಂ ಧರ್ಮದ ಮಹಿಳೆಯೋರ್ವರು ಭಕ್ತಿಯಿಂದ ಶಿವಲಿಂಗದ ದರ್ಶನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಅನ್ಯ ಧರ್ಮದ ಮಹಿಳೆಯ ಶಿವಭಕ್ತಿ ಕಾರ್ಯಕ್ರಮದ ಮಹತ್ವಕ್ಕೆ ಇನ್ನಷ್ಟು ಮೆರುಗು ನೀಡಿತು.


