ವಿಜಯಸಾಕ್ಷಿ ಸುದ್ದಿ, ಗದಗ: ಗುಜರಾತ್ನ ಸೋಮನಾಥ ದೇವಾಲಯದ ಪುನರುತ್ಥಾನದ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಸೋಮನಾಥ ಸ್ವಾಭಿಮಾನ ಅಭಿಯಾನದ ಅಂಗವಾಗಿ ಶನಿವಾರ ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.
ಸೋಮನಾಥ ದೇವಾಲಯದ ಮೇಲೆ ಮುಹಮ್ಮದ ಘಜನಿ ದಾಳಿ ನಡೆಸಿ ಸಾವಿರ ವರ್ಷಗಳು ಪೂರೈಸಿವೆ. ಈ ಹಿಂದೆ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಜನತೆಯ ಸಹಕಾರದೊಂದಿಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದರು. ಆ ಘಟನೆಗೆ 75 ವರ್ಷ ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ನಗರದ ತ್ರಿಕೂಟೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ಶಿವ ಪಂಚಾಕ್ಷರಿ ಮಂತ್ರವನ್ನು ಉಚ್ಚರಿಸುತ್ತಾ ಸಾಮೂಹಿಕ ಧ್ಯಾನ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರಡಗಿ ಮಾತನಾಡಿ, ಸೋಮನಾಥ ದೇವಾಲಯವು ಭಾರತೀಯರ ಸ್ವಾಭಿಮಾನದ ಸಂಕೇತ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥನಲ್ಲಿ ಪೂಜೆ ಸಲ್ಲಿಸಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅದರ ಅಂಗವಾಗಿ ಪ್ರತಿ ಮಂಡಲದಲ್ಲಿ ಶಿವನ ಆರಾಧನೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಶ್ರೀಪತಿ ಉಡುಪಿ, ಸುರೇಶ ಮರಳಪ್ಪನವರ, ಶಂಕರ ಕಾಕಿ, ಸುರೇಶ ಚಿತ್ತರಗಿ ಮುಂತಾದವರು ಇದ್ದರು.



