ಮಾಲೆ: ಮಾಲ್ಡೀವ್ಸ್‌ನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಸ್ಪೀಡ್ ಬೋಟ್ ಮಗುಚಿ ಬಿದ್ದ ಪರಿಣಾಮ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಗಾಯಗೊಂಡಿದ್ದು, ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ.
ಶುಕ್ರವಾರ ಮುಂಜಾನೆ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಪಲ್ಟಿಯಾಗಿದ್ದು, ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಅಪಘಾತದ ನಂತರ ಗೌತಮ್ ಸಿಂಘಾನಿಯಾ ಅವರನ್ನು ತಕ್ಷಣ ರಕ್ಷಿಸಿ ಏರ್ ಲಿಫ್ಟ್ ಮೂಲಕ ಮುಂಬೈಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಮಾಲ್ಡೀವ್ಸ್ ಅಧಿಕಾರಿಗಳ ಪ್ರಕಾರ, ದೋಣಿಯಲ್ಲಿ ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾದ ಇಬ್ಬರು ಮಹಿಳೆಯರು ಹಾಗೂ ಐದು ಭಾರತೀಯರು ಇದ್ದರು. ಅಪಘಾತದ ವೇಳೆ ರಷ್ಯಾದ ಮಹಿಳೆ ಸೇರಿದಂತೆ ನಾಲ್ವರು ಭಾರತೀಯರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಇವರಲ್ಲಿ ಇಬ್ಬರು ಭಾರತೀಯರು ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ಖ್ಯಾತ ರ‍್ಯಾಲಿ ಚಾಲಕ ಹರಿ ಸಿಂಗ್ ಕೂಡ ಸೇರಿದ್ದಾರೆ.
ಸ್ಥಳೀಯ ಪೊಲೀಸ್ ಹಾಗೂ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಅಲೆಗಳ ಅಬ್ಬರದಿಂದ ಹುಡುಕಾಟ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



