12ನೇ ಶತಮಾನದ ಶಿವಶರಣರಲ್ಲಿ ‘ಆಧ್ಯಾತ್ಮಿಕ ಕ್ಷೇತ್ರದ ಧ್ರುವತಾರೆ’ ಎನಿಸಿಕೊಂಡ ದಿಟ್ಟತನದ ವ್ಯಕ್ತಿತ್ವದ ಶಿವಶರಣೆ ಅಕ್ಕಮಹಾದೇವಿಯವರು. ಇಡೀ ಮಹಿಳಾ ಸಂಕುಲಕ್ಕೆ ಮಾದರಿಯಾದವರು. ಕದಳಿಯ ಕರ್ಪೂರವಾಗಿ, ತಮ್ಮ ಅನುಭಾವದ ವಚನಗಳ ಮೂಲಕ ಜನಮಾನಸದಲ್ಲಿ ಅಂತರಾಳದ ಅರಿವನ್ನುಂಟು ಮಾಡಿದವರು. ಅಂತಹದೇ ಆಧ್ಯಾತ್ಮಿಕ ಒಲವನ್ನು ಹೊಂದಿದ, ಈ ನಾಡಿನ ಆಧ್ಯಾತ್ಮಿಕ ಮಹಾ ಬೆಳಕಾದವರು, ಗದುಗಿನ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯ ಶ್ರೀ ಶಿವಶರಣೆ ನೀಲಮ್ಮ ತಾಯಿಯವರು.
ಪ್ರತಿವರ್ಷ ಭಾರತ ಹುಣ್ಣಿಮೆಯ ದಿನದಂದು ಆಧ್ಯಾತ್ಮ ವಿದ್ಯಾಶ್ರಮದ ಶ್ರೀ ಆದಿಶಕ್ತಿ ಮಹಾರಥೋತ್ಸವ, ಸತ್ಸಂಗ, ಹಾಗೂ ಶ್ರೀ ಜಗದ್ಗುರು ಸದಾಶಿವಾನಂದ ಗುರುಗಳವರ ಜಯಂತ್ಯುತ್ಸವ ನೆರವೇರುವುದು. ಗದುಗಿನ ಪುಣ್ಯಭೂಮಿ ಅನೇಕ ಸಾಧು-ಸಂತರ ಶಿವಶರಣರ ಆಧ್ಯಾತ್ಮಿಕ ನೆಲೆಬೀಡು. ಮನುಷ್ಯ ಲೌಕಿಕ ಜೀವನದ ಜಂಜಡಗಳನ್ನು ಕ್ಷಣಕಾಲವಾದರೂ ಬದಿಗಿಟ್ಟು ಸತ್ಸಂಗಗಳಲ್ಲಿ, ಆಧ್ಯಾತ್ಮಿಕ ಚಿಂತನೆಯ ಸಭೆ-ಸಮಾರಂಭಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ, ಇಂತಹ ಮಹನೀಯರ ಆಧ್ಯಾತ್ಮಿಕ ಅರಿವಿನ ಚಿಂತನೆಯನ್ನು ಅರ್ಥೈಸಿಕೊಂಡಾಗ ಮನುಷ್ಯ ಜೀವನ ಸಾರ್ಥಕತೆಯ ಹಾದಿಯಲ್ಲಿ ಸಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಆಧ್ಯಾತ್ಮಿಕ ಪರಿಸರವನ್ನು ಗದುಗಿನ ಪುಣ್ಯಭೂಮಿಯಲ್ಲಿ ನಿರ್ಮಾಣ ಮಾಡುವ ಮೂಲಕ ಯಾವುದೇ ಜಾತಿ-ಮತ-ಭೇದ ಭಾವಗಳಿಲ್ಲದೆ ಸರ್ವರಿಗೂ ಸಮಾನತೆಯ ದೃಷ್ಟಿಯನ್ನು ಹೊಂದಿ, ನೀಲಮ್ಮ ತಾಯಿಯವರ ಆಧ್ಯಾತ್ಮ ವಿದ್ಯಾಶ್ರಮ ಭಕ್ತಿ ಭಾವಗಳ ಸಂಗಮವಾಗಿದೆ.
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಿಶ್ವಿನಹಳ್ಳಿ ಗ್ರಾಮದ ವೀರಶೈವ ಮನೆತನದಲ್ಲಿ ಕೃಷಿ ಕಾಯಕ ನಿಷ್ಠರಾಗಿದ್ದ ಶ್ರೀ ಯಲ್ಲಪ್ಪ ಹಾಗೂ ಸಂಗಮ್ಮ ನವರ ಪುಣ್ಯ ಗರ್ಭದಲ್ಲಿ ಜನಿಸಿದ ನೀಲಮ್ಮ ತಾಯಿಯವರು ಬಾಲ್ಯದಿಂದಲೂ ಆಧ್ಯಾತ್ಮಿಕ ಸೆಳೆತವನ್ನು ಹೊಂದಿದ್ದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ನಂತರ ಮನೆಯಲ್ಲಿ ಮದುವೆಯ ಪ್ರಸ್ತಾಪ ಪ್ರಾರಂಭವಾಯಿತು. ಆದರೆ ನೀಲಮ್ಮ ತಾಯಿಯವರಲ್ಲಿ ಐಹಿಕ ಜೀವನದ ವೈರಾಗ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಅಕ್ಕಮಹಾದೇವಿಯವರಂತೆ ವೀರ ವಿರಾಗಿಣಿಯಾಗಿ ತಮ್ಮ ಬದುಕನ್ನು ಸನ್ಯಾಸಿನಿಯಾಗಿ, ಆಧ್ಯಾತ್ಮಿಕ ಜೀವನಕ್ಕೆ ಮೀಸಲಾಗಿಡಬೇಕು ಎನ್ನುವ ಪ್ರಬಲವಾದ ಇಚ್ಛೆಯೊಂದಿಗೆ ಬಸವಾದಿ ಶರಣರ, ವೇದ ಉಪನಿಷತ್ತಿನ, ಆತ್ಮಜ್ಞಾನವನ್ನು ಹೊಂದಬೇಕೆಂಬ ಇವರ ಅನ್ವೇಷಣೆ ನಿತ್ಯವೂ ಲಿಂಗಪೂಜೆ ಜಪ-ಪೂಜೆ, ಧ್ಯಾನ ಹಾಗೂ ಗ್ರಂಥಗಳ ಅಧ್ಯಯನದಲ್ಲಿ ತಲ್ಲೀನರಾಗುತ್ತಿದ್ದರು.
ಗುರುಗಳ ದೀಕ್ಷೆ ಪಡೆದ ನಂತರ ಇವರ ಆಧ್ಯಾತ್ಮಿಕ ಹಂಬಲ ಹೆಚ್ಚುತ್ತ ಹೋಯಿತು. ಪುರಾಣ ಪುಣ್ಯ ಕಥೆಗಳನ್ನು ಓದುವುದು, ಪ್ರವಚನವನ್ನು ಕೇಳುವುದು ಮಠ-ಮಾನ್ಯಗಳಿಗೆ ಹೋಗುವುದು, ಪೂಜೆ ಧ್ಯಾನ ಮುಂದುವರೆಯುತ್ತಾ ಕೊನೆಗೊಂದು ದಿನ ಎಲ್ಲವನ್ನೂ ತೊರೆದು ಸನ್ಯಾಸಿನಿಯಾಗಿ ಆತ್ಮಜ್ಞಾನದ ಅರಿವನ್ನು ಇಡೀ ಸಮಾಜಕ್ಕೆ ಉಣಬಡಿಸಬೇಕು ಎನ್ನುವ ಮಹದಾಸೆ ಇವರಲ್ಲಿ ಇತ್ತು. ಮನೆಯವರೆಲ್ಲರೂ ಕೂಡ ವಿರೋಧಿಸಿದರು. ಎಲ್ಲಾ ಸಂಕೀರ್ಣತೆಗಳನ್ನು ಮೀರಿ, ಎಲ್ಲಾದರೂ ಗುರುಗಳ ಹತ್ತಿರ ಆಶ್ರಯವನ್ನು ಪಡೆದು ಆಧ್ಯಾತ್ಮಿಕ ಉನ್ನತಿಯನ್ನು ಹೊಂದಲೇಬೇಕೆಂದು ದಿಟ್ಟತನವನ್ನು ಮನದಲ್ಲಿ ತಾಳಿದರು.
ಈ ಎಲ್ಲಾ ಸಂಗತಿಗಳನ್ನು ಗಮನಿಸಿದ ಶಿವಾನಂದ ಮಠದ ಹಿರಿಯ ಸ್ವಾಮಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಈ ಮಗುವಿಗೆ ಎಲ್ಲಾದರೂ ಒಂದುಕಡೆ ಆಶ್ರಯ ನೀಡಿ ಇವರ ಆಧ್ಯಾತ್ಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಇಚ್ಛೆಯನ್ನು ಹೊಂದಿ, ಶಿವಾನಂದ ಮಠದ ಪರಮ ಭಕ್ತರಾಗಿದ್ದ ಪಕ್ಕದೂರು ಅಸುಂಡಿಯ ವೆಂಕರಡ್ಡಿ ಹುಚ್ಚಣ್ಣವರ ಅವರನ್ನು ಕರೆದು ತಾಯಿಗೆ ಆಶ್ರಯ ನೀಡಬೇಕು ಎಂದು ಕೇಳಿಕೊಂಡಾಗ, ನಡೆ-ನುಡಿಯಲ್ಲಿ ಪವಿತ್ರತೆಯನ್ನು ಹೊಂದಿದ್ದ, ಪರಿಶುದ್ಧ ಅಂತಃಕರಣದ ದೈವೀ ಗುಣ ಸಂಪನ್ನರಾದ ವೆಂಕರಡ್ಡಿ ಹುಚ್ಚಣ್ಣವರ ಹಾಗೂ ಅವರ ಧರ್ಮಪತ್ನಿ ವೆಂಕಮ್ಮನವರು ನೀಲಮ್ಮ ತಾಯಿಯವರನ್ನು ತಮ್ಮ ಮಗಳಾಗಿ ಸ್ವೀಕರಿಸಿ, ಮಮತೆ ವಾತ್ಸಲ್ಯವನ್ನು ತೋರುತ್ತಾ ಇವರ ಆಧ್ಯಾತ್ಮಿಕ ಉನ್ನತಿಗೆ ಪ್ರೇರಕ ಶಕ್ತಿಯಾದರು.
ನೀಲಮ್ಮ ತಾಯಿಯವರ ಸತತ ಪರಿಶ್ರಮ ಆಧ್ಯಾತ್ಮಿಕ ಅನ್ವೇಷಣೆಯ ಹಂಬಲ, ಇವರನ್ನು ಇಂದು ಆಧ್ಯಾತ್ಮಿಕ ಉನ್ನತಿಯ ಮೇರು ಶಿವಶರಣೆಯನ್ನಾಗಿ ಮಾಡಿದೆ. ಈ ನಾಡಿನ ಮಹಾನ್ ಪೂಜ್ಯ ಗುರುಗಳಿಂದ ಮಠಮಾನ್ಯಗಳಿಂದ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಗಮಕ ಕಲಾ ವಿಶಾರದೆ, ನಿಜಾನುಭಾವಿ, ಗುರುಭಕ್ತಿ ಚಂದ್ರಿಕೆ, ಪ್ರವಚನ ಕಲಾನಿಧಿ ಇನ್ನೂ ಮುಂತಾದ ಬಿರುದುಗಳನ್ನು ನೀಡಿ ಸನ್ಮಾನಿಸಿದ್ದಾರೆ.
ನಾಡಿನ ಭಕ್ತಾದಿಗಳ ಸಹಕಾರದೊಂದಿಗೆ ಇವರ ತಂದೆ ಶ್ರೀ ವೆಂಕರಡ್ಡಿ ಹುಚ್ಚಣ್ಣವರ ಇವರ ಸತತ ಪರಿಶ್ರಮದ ಫಲವಾಗಿ, ಮುಗುಳಕೋಡದ ಪೂಜ್ಯ ಶ್ರೀ ಸಿದ್ದರಾಮೇಶ್ವರ ಶಿವಯೋಗಿಗಳವರ ಸೂಚನೆ ಮೇರೆಗೆ ಜಗದ್ಗುರು ಶಿವಾನಂದ ಸ್ವಾಮಿಗಳ ಆಶೀರ್ವಾದದೊಂದಿಗೆ ಗದುಗಿನಲ್ಲಿ ಶ್ರೀ ಶಿವಶರಣೆ ನೀಲಮ್ಮ ತಾಯಿ ಆಧ್ಯಾತ್ಮ ವಿದ್ಯಾಶ್ರಮ ನಿರ್ಮಾಣಗೊಂಡಿತು. ಈ ವಿದ್ಯಾಶ್ರಮ ದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಹಿಳೆಯರಿಗೆ ಸತ್ಸಂಗ ಆಧ್ಯಾತ್ಮಿಕ ಚಿಂತನೆ ಗೋಷ್ಠಿಗಳು ನಡೆಯುತ್ತವೆ. ಇವರ ಈ ಆಧ್ಯಾತ್ಮಿಕ ಸಾಧನೆಯನ್ನು ಗುರುತಿಸಿ ಚೆನ್ನೈ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯವು 2017ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
ಈ ವರ್ಷ ವಿಶೇಷವಾಗಿ 7.2.2025ರಿಂದ 11.2.2025ರವರೆಗೆ ಪ್ರತಿದಿನ ಸಾಯಂಕಾಲ 6ರಿಂದ 7:30ರವರೆಗೆ ವಚನ ಚಿಂತನ ಪ್ರವಚನ ವಿಶೇಷ ಕಾರ್ಯಕ್ರಮ ಪರಮಪೂಜ್ಯ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮಹಾಂತ ಬಸವಲಿಂಗ ಮಹಾಸ್ವಾಮಿಗಳು ಹಾಸನ ಬೇಲೂರು ಅವರಿಂದ ಪ್ರವಚನ ಏರ್ಪಡಿಸಿದ್ದು, ಎಲ್ಲ ಭಕ್ತಾದಿಗಳಿಗೆ ಜ್ಞಾನಾಮೃತವನ್ನು ನೀಡಿದ್ದಾರೆ. ಜೊತೆಗೆ ಪ್ರತಿದಿನ ಪ್ರವಚನದ ನಂತರದಲ್ಲಿ ಸಾಯಂಕಾಲ 7:30ಕ್ಕೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದು ವಿಶೇಷವಾಗಿತ್ತು. ಗದುಗಿನ ಆಧ್ಯಾತ್ಮದ ನೆಲೆಬೀಡಿನಲ್ಲಿ ಮಹಿಳಾ ಸಂಕುಲದ ಮಹಾ ಶಕ್ತಿಯಾಗಿ ಶಿವಶರಣೆ ಡಾ. ನೀಲಮ್ಮ ತಾಯಿಯವರು ನಮ್ಮೆಲ್ಲರಿಗೂ ಸನ್ಮಾರ್ಗದ ಹಾದಿ ತೋರುತ್ತಿದ್ದಾರೆ.
– ಸುಧಾ ಹುಚ್ಚಣ್ಣವರ.
ಉಪನ್ಯಾಸಕರು, ಲೇಖಕರು- ಶಿರಹಟ್ಟಿ.