ಸುಖಮಯ ಬದುಕಿಗೆ ಆಧ್ಯಾತ್ಮ ಸಂಜೀವಿನಿ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ಬದುಕಿನಲ್ಲಿ ಭೌತಿಕ ಸಂಪತ್ತು ಕೆಲವು ಕಾಲದವರೆಗೆ ಸುಖ ಕೊಡಬಹುದು. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ಸುಖ-ಶಾಂತಿಯ ಬದುಕಿಗೆ ಆಧ್ಯಾತ್ಮ ಜೀವನ ಸಂಜೀವಿನಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ಸಿದ್ಧೇಶ್ವರ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬಹು ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವುಳ್ಳ ಮಾನವ ಜನ್ಮದಲ್ಲಿ ಹುಟ್ಟಿ ಬಂದ ಬಳಿಕ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸದಿದ್ದರೆ, ಗುರು ಕಾರುಣ್ಯ ಪಡೆಯದಿದ್ದರೆ ಜೀವನ ವ್ಯರ್ಥವಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಜ್ಞಾನ ಅವಶ್ಯಕವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವ ಜೀವನದ ವಿಕಾಸ ಅಭ್ಯುದಯಕ್ಕಾಗಿ ಕೊಟ್ಟ ಸಂದೇಶ ಅಂದಿಗಷ್ಟೇ ಅಲ್ಲ, ಎಂದೆಂದಿಗೂ ದಾರಿದೀಪ. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆಯಿಂದ ಬಾಳಿ ಸಾಮರಸ್ಯ ಸೌಹಾರ್ದತೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು.

ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ವಾಗ್ಮಿಗಳಾಗಿ ಸಮಕಾಲೀನ ಪರಿಜ್ಞಾನವನ್ನು ಹೊಂದಿ ಧಾರ್ಮಿಕ, ಶೈಕ್ಷಣಿಕ, ಸಾಯವ ಕೃಷಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಬಹಳಷ್ಟು ಕಾರ್ಯ ಮಾಡುತ್ತಿರುವುದು ತಮಗೆ ಸಂತೋಷ ತಂದಿದೆ. ಈ ಭಾಗದಲ್ಲಿ ವೀರಶೈವ ಧರ್ಮ ಸಂಸ್ಕೃತಿ-ಗುರು ಪರಂಪರೆ ಬಲವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ರೇಶ್ಮೆ ಮಡಿ ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಡಾ. ಅಭಿನವ ಶಾಂತಲಿಂ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮಕ್ಕೊಂದು ಉನ್ನತ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಿಂದ ಸ್ಥಾಪಿತವಾದ ವೀರಶೈವ ಧರ್ಮವನ್ನು ಆಯಾ ಕಾಲ ಘಟ್ಟಗಳಲ್ಲಿ ಅನೇಕ ಮಹಾತ್ಮರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ನರಗುಂದ ಪಂಚಗೃಹ ಹಿರೇಮಠದ ಇತಿಹಾಸ ಪರಂಪರೆ ಶ್ರೇಷ್ಠವಾದುದು. ಇಂದಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಆಧುನಿಕ ವಿಚಾರಧಾರೆಗಳೊಂದಿಗೆ ಪರಂಪರೆಗೆ ಬಹು ದೊಡ್ಡ ಶಕ್ತಿಯಾಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ನರಗುಂದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ತಾತ್ವಿಕ ಚಿಂತನಗಳ ಅವಶ್ಯಕತೆಯಿದೆ. ಮಾತು-ಮನ-ಕೃತಿ ಒಂದಾಗಿ ಬಾಳಿದಾಗ ಜೀವನದಲ್ಲಿ ಉನ್ನತಿ ಕಟ್ಟಿಟ್ಟ ಬುತ್ತಿ. ವೀರಶೈವ ಧರ್ಮದ ತತ್ವ ತ್ರಯಗಳು ಜೀವನದ ವಿಕಾಸಕ್ಕೆ ಭದ್ರ ಅಡಿಪಾಯ. ಸತ್ಯ ಶುದ್ಧ ಧರ್ಮಾಚರಣೆ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು.

ಪುರಸಭೆ ಅಧ್ಯಕ್ಷರಾದ ಅನ್ನಪೂರ್ಣ ಸಿ.ಯಲಿಗಾರ, ಪಂಚಣ್ಣ ಬೆಳವಟಗಿ, ಶಿವಾನಂದ ಮುತವಾಡ, ಅಜ್ಜಪ್ಪಗೌಡ ಪಾಟೀಲ, ಪಿ.ಎಲ್. ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಶಿವಾನಂದ ಮುತವಾಡ, ಎಸ್.ಎಚ್. ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು.

ಸಮಾರಂಭಕ್ಕೂ ಮುನ್ನ ಗವಿಸಿದ್ಧೇಶ್ವರ ಶಾಸ್ತ್ರಿಗಳು ಬೂದಿಹಾಳ ಇವರಿಂದ ನವಲಗುಂದ ಶ್ರೀ ಅಜಾತ ನಾಗಲಿಂಗ ಅಜ್ಜನ ಚರಿತ್ರೆ ಕುರಿತು ಪ್ರವಚನ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಗುಂದ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಸಿ.ಸಿ. ಪಾಟೀಲ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವಕ್ಕೆ ಅಪೂರ್ವ ಇತಿಹಾಸ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಪೂರ್ವ ಕಾಲದಲ್ಲಿ ಕೊಟ್ಟ ಸಂದೇಶವನ್ನು 12ನೇ ಶತಮಾನದ ಬಸವಾದಿ ಶರಣರು ಪರಿಪಾಲಿಸಿ ಮತ್ತಷ್ಟು ಬೆಳೆಸಿದ ಕೀರ್ತಿ ಸಲ್ಲುತ್ತದೆ. ಬಹಳ ವರುಷಗಳ ನಂತರ ಮತ್ತೊಮ್ಮೆ ನಗರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಭಕ್ತ ಸಂಕುಲಕ್ಕೆ ಸಂತೋಷವಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here