ವಿಜಯಸಾಕ್ಷಿ ಸುದ್ದಿ, ದೇವದುರ್ಗ: ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ, ಬಲ ತಂದುಕೊಡುತ್ತದೆ. ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಅಡಿಪಾಯ. ಅಶಾಂತಿ, ಅತೃಪ್ತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಆಧ್ಯಾತ್ಮದ ಅರಿವು ಮತ್ತು ಪರಿಪಾಲನೆ ಅವಶ್ಯಕವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ನೀಲಗಲ್ ಬೃಹನ್ಮಠದಲ್ಲಿ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ನೂತನ ರಥದ ಉದ್ಘಾಟನೆ ಹಾಗೂ ನೀಲಗಲ್ ಬೃಹನ್ಮಠದ ಡಾ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳವರ 75ನೇ ವರುಷದ ಜನ್ಮ ಅಮೃತ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನ ಮನಸ್ಸು ಬುದ್ಧಿ ಮತ್ತು ಸದ್ವಿಚಾರಗಳು ಹುಲುಸಾಗಿ ಬೆಳೆದಾಗ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ವ್ಯಕ್ತಿ ಜೀವನದಲ್ಲಿ ಸುವರ್ಣ ಸಂಪಾದಿಸದಿದ್ದರೂ ಪರವಾಗಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಬೇಕು. ನದಿಯ ನೀರನ್ನು ಎಷ್ಟು ತುಂಬಿದರೂ ಅದು ಹೇಗೆ ಖಾಲಿಯಾಗುವುದಿಲ್ಲವೋ ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಅದು ಖಾಲಿಯಾಗುವುದಿಲ್ಲ. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯಲಾರದ ಕಾರಣ ಅನೇಕ ಆತಂಕಗಳನ್ನು ಎದುರಿಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೀಲಗಲ್ ಬೃಹನ್ಮಠದ ಡಾ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮ ಮತ್ತು ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ. ಯುವ ಜನಾಂಗಕ್ಕೆ ಇತಿಹಾಸದ ಅರಿವು ಅಗತ್ಯವಿದೆ. ರಾಷ್ಟç ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯಾವುದೇ ವಿಶ್ವ ವಿದ್ಯಾಲಯ ಕಲಿಸಿಕೊಡದ ಜ್ಞಾನವನ್ನು ಜೀವನಾನುಭವ ಕಲಿಸಿಕೊಡುತ್ತದೆ. ವೀರಶೈವ ಧರ್ಮದ ಮೂಲ ಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳನ್ನು ಅರಿತು ಆ ದಾರಿಯಲ್ಲಿ ನಡೆದರೆ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
ಸಮಾರಂಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ರಾಯಚೂರು ಸೋಮವಾರ ಪೇಟೆ ರಾಚೋಟಿ ಶಿವಾಚಾರ್ಯರು, ಗಬ್ಬೂರು ಬೂದಿಬಸವ ಶಿವಾಚಾರ್ಯರು, ದೇವದುರ್ಗ ಸಿದ್ಧರಾಮ ಶಿವಾಚಾರ್ಯರು, ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ನವಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಕಡೇಚೂರ ಗುರುಮೂರ್ತಿ ಶಿವಾಚಾರ್ಯರು, ಸುಲ್ತಾನಪುರ ಸೋಮನಾಥ ಶಿವಾಚಾರ್ಯರು, ರಾಯಚೂರು ಮಂಗಳವಾರಪೇಟೆಯ ವೀರಸಂಗಮೇಶ್ವರ ಶಿವಾಚಾರ್ಯರು, ಸಂತೆಕಲ್ಲೂರು ಮಹಾಂತ ಶಿವಾಚಾರ್ಯರು, ರಾಯಚೂರು ಮಂಗಳವಾರಪೇಟೆಯ ವೀರಸಂಗಮೇಶ್ವರ ಶಿವಾಚಾರ್ಯರು, ಗುರಗುಂಟ ಸದಾನಂದ ಶಿವಾಚಾರ್ಯರು, ರಾಯಚೂರು ಮಂಗಳವಾರಪೇಟೆಯ ವೀರಸಂಗಮೇಶ್ವರ ಶಿವಾಚಾರ್ಯರು, ಹರಳಹಳ್ಳಿ ಶರಣಬಸವ ದೇವರು ಪಾಲ್ಗೊಂಡಿದ್ದರು. ಹಲವಾರು ರಾಜಕೀಯ ಗಣ್ಯರು ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
ಮಾಜಿ ಸಚಿವ ಅಮರೇಗೌಡ ಪಾಟೀಲ ಬೈಯಾಪುರ ಮಾತನಾಡಿ, ಧರ್ಮ ಸಂಸ್ಕೃತಿಯಿAದ ಬಾಳಿದರೆ ಜೀವನದಲ್ಲಿ ಸುಖ-ಶಾಂತಿ ಸಿಗುವುದೆಂದರು. ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಮಾತನಾಡಿದರು. ಶಾಸಕ ಹಂಪನಗೌಡ ಬಾದರ್ಲಿ, ಅ.ಭಾ.ವಿ.ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶರಣ ಬೂಪಾಲ ನಾಡಗೌಡ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಮನುಷ್ಯನ ಜೀವನ ಅಶಾಂತಿಯಿಂದ ತತ್ತರಿಸುತ್ತಿದೆ. ಯುವ ಜನಾಂಗ ಧರ್ಮದ ಆಚರಣೆಯಿಂದ ದೂರ ಸರಿಯುತ್ತಿದ್ದಾರೆ. ವೀರಶೈವ ಮಠಗಳು ಧಾರ್ಮಿಕ ಸಂಸ್ಕೃತಿ ಪುನರುತ್ಥಾನಗೊಳಿಸುವ ಕಾರ್ಯ ಮಾಡುತ್ತಿವೆ. ನೀಲುಗಲ್ ಶ್ರೀಗಳ ಸಮಾಜ ಸೇವ ಕಾರ್ಯ ಮರೆಯಲಾಗದೆಂದರು.