ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಲಿಕೆಯ ಜೊತೆಗೆ ಮಕ್ಕಳಲ್ಲಿ ಕ್ರೀಡಾಸಕ್ತಿಯೂ ಅತ್ಯಮೂಲ್ಯವಾದದ್ದು ಎಂದು ಬಿಇಓ ಎಚ್ ಲೇಪಾಕ್ಷಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೃಂಗಾರತೋಟದ ವತಿಯಿಂದ ನಡೆದ ಬಾಗಳಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆಯೂ ಅಗತ್ಯವಾಗಿದೆ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ದೈಹಿಕ ಮತ್ತು ಮಾನಸಿಕವಾಗಿ ನಿಯಂತ್ರಣ ಕಾಪಾಡಿಕೊಳ್ಳಬಹುದು. ಮಕ್ಕಳು ಯಾವ ರಂಗದಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ ಎನ್ನುವುದನ್ನು ಪೋಷಕರು ಸರಿಯಾಗಿ ಗಮನಿಸಿ, ಅವರ ಇಚ್ಛೆಗೆ ತಕ್ಕಂತೆ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ಆಟದಲ್ಲಿ ಸೋಲು-ಗೆಲುವುಗಳು ಸಹಜ. ಆದರೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಗುಣವನ್ನು ಶಿಕ್ಷಕರು ಬೆಳೆಸಬೇಕು. ಟಿವಿ, ಮೊಬೈಲ್‌ಗಳ ಗೀಳು ಹೆಚ್ಚಾಗಿ ಮಕ್ಕಳಲ್ಲಿ ದೈಹಿಕ ಪರಿಶ್ರಮ ಇಲ್ಲದಂತಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಆದ್ದರಿಂದ, ಆರೋಗ್ಯತಯುತ ಜೀವನಕ್ಕಾಗಿ ಕ್ರೀಡೆಯು ಅಮೂಲ್ಯ ಎಂದರು.
ಟಿಪಿಇಓ ಕೆ.ಷಣ್ಮುಖಪ್ಪ ಮಾತನಾಡಿ, ಮಕ್ಕಳಲ್ಲಿ ಸ್ನೇಹ ಬೆಳೆಸಲು ಕ್ರೀಡೆಯು ಉತ್ತಮ ವೇದಿಕೆಯಾಗಿದೆ. ಕ್ರೀಡೆಯಿಂದ ಮನಸ್ಸಿಗೆ ಉಲ್ಲಾಸದ ವಾತವರಣ ಸೃಷ್ಟಿಯಾಗುತ್ತದೆ. ಕ್ರೀಡಾಳುಗಳು ತೀರ್ಪುಗಾರರ ತೀರ್ಪಿಗೆ ಬದ್ಧರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಎ.ಡಿ. ನಾಗರಾಜ್, ಟಿಪಿಇಓ ಷಣ್ಮುಖಪ್ಪ, ಬಿಆರ್‌ಪಿ ಎಸ್. ನಾಗರಾಜ್, ಸಿಆರ್‌ಪಿ ಪ್ರಶಾಂತ, ಬಾಗಳಿ ಗ್ರಾ.ಪಂ ಅಧ್ಯಕ್ಷೆ ರೇಣುಕ, ವಲಯ ಸಂಚಾಲಕರಾದ ರೂಪಾದೇವಿ ಶೃಂಗಾರತೋಟದ, ಮುಖ್ಯ ಶಿಕ್ಷಕಿ ಸುಜಾತ, ಎಸ್ಡಿಎಂಸಿ ಅಧ್ಯಕ್ಷ ಹನುಮಜ್ಜ, ಶಿಕ್ಷಕರಾದ ಎ. ಅನಂತ, ಬಂದೋಳ್ ಸಿದ್ದೆಶ್, ರಾಜಕುಮಾರ್, ಎಂ. ರಮೇಶ್, ಜಯಪ್ರಕಾಶ್, ರಾಜಶೇಖರ್ ಬಿ, ಅಂಗಡಿ ಮಂಜುನಾಥ, ಅಣ್ಣಪ್ಪ, ಬಸವರಾಜ ಮುಂತಾದವರಿದ್ದರು.