ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆ, ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯದ ಜೊತೆಗೆ ಹೆಚ್ಚು ಕ್ರಿಯಾಶೀಲರಾಗಿರಲು ಅನುಕೂಲವಾಗುತ್ತದೆ ಎಂದು ಬಾಗಮಾರ ಸೇವಾ ಸಮಿತಿಯ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಅಧ್ಯಕ್ಷ ಅಶೋಕುಮಾರ ಬಾಗಮಾರ ಹೇಳಿದರು.
ಪಟ್ಟಣದ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಬೃಂದಾವನ ಎಂಟರ್‌ಪ್ರೈಸಸ್ ಹಾಗೂ ಗಜೇಂದ್ರಗಡ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವೈಟ್ ಲೆದರ್ ಬಾಲ್ ಮುಕ್ತ ಪ್ರೀಮಿಯಂ ಕ್ರಿಕೆಟ್ ಲೀಗ್ ಉದ್ಘಾಟಿಸಿ ಮಾತನಾಡಿದರು.
ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೊರತಾಗಿ, ದುಶ್ಚಟಗಳಿಗೆ ಬಲಿಯಾಗಿ ಉತ್ತಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಕ್ರೀಡೆಗಳಲ್ಲಿಯೇ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು. ಎಲ್ಲಾ ವಯೋಮಾನದವರೂ ಕ್ರಿಕೆಟ್ ಆಡುತ್ತಾರೆ. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕೇ ಹೊರತು ಸಂಘರ್ಷದ ಮನೋಭಾವ ಇರಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ಎಚ್. ಸೋಂಪುರ, ಶಿವು ಜಾಲಿಹಾಳ, ಖಾಜಾಹುಸೇನ್ ಸರಕಾವಸ್, ರಾಚಯ್ಯ ಕಪ್ಲಿಮಠ, ಸಂಗಯ್ಯ ಹಿರೇಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಕ್ರೀಡಾ ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಿಗೆ ಶುಭ ಹಾರೈಸಿ, ಕ್ರೀಡೆಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಬೇಕೆಂದು ಕರೆ ನೀಡಲಾಯಿತು.



