ವಿಜಯಸಾಕ್ಷಿ ಸುದ್ದಿ, ರೋಣ: ಮಗುವಿನ ಆತ್ಮವಿಶ್ವಾಸ ವೃದ್ಧಿಸುವಲ್ಲಿ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿದ್ದು, ಈ ದಿಶೆಯಲ್ಲಿ ಅಂಜುಮನ್ ಸಂಸ್ಥೆಯ ಪಬ್ಲಿಕ್ ಶಾಲೆಯ ಶಿಕ್ಷಕರು ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಿದ್ದು ಸ್ವಾಗತರ್ಹ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಕ್ಷಯ ಪಾಟೀಲ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಂಜುಮನ್ ಸಂಸ್ಥೆಯ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮಗುವಿನಲ್ಲಿಯೂ ಪ್ರತಿಭೆ ಅಡಕವಾಗಿರುತ್ತದೆ. ಇದನ್ನು ಶಿಕ್ಷಕರು ಅರಿತು ಗುರುತಿಸಬೇಕು. ಮಕ್ಕಳಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸುವ ಜೊತೆಗೆ ಅವರಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರ ತರಬೇಕು. ವಿದ್ಯಾರ್ಥಿಗಳ ಪಾಲಕರು ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲಿಸಬೇಕು ಎಂದರು.
ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾವಾಸಾಬ ಬೆಟಗೇರಿ ಮಾತನಾಡಿ, ಪಬ್ಲಿಕ್ ಶಾಲೆ ಆರಂಭಗೊಂಡು ವರ್ಷ ಕಳೆಯಿತು. ಪಟ್ಟಣದ ಜನತೆಯ ಬೆಂಬಲದಿಂದ ವರ್ಷದ ಅವಧಿಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ನುರಿತ ಹಾಗೂ ಅನುಭವ ಹೊಂದಿರುವ ಶಿಕ್ಷಕ ಬಳಗ ಶಾಲೆಯ ಪ್ರಗತಿಗೆ ಶ್ರಮಿಸಿದ್ದಾರೆ. ಅಲ್ಲದೆ ಅಕ್ಷರ ಜ್ಞಾನದಲ್ಲಿಯೂ ಕೂಡ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇದರಿಂದ ಶಾಲೆಯ ಕೀರ್ತಿ ಹೆಚ್ಚಿದೆ. ಕ್ರೀಡಾಕೂಟದಿಂದ ಮುಗ್ಧ ಮಕ್ಕಳ ಮನಸ್ಸು ಮುದಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಕಿರೇಸೂರ, ಮಲಿಕ ಯಲಿಗಾರ, ರಿಯಾಜ್‌ಅಹ್ಮದ ಮುಲ್ಲಾ, ಅಯೂಬ್ ಖಾನ್ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.


