ವಿಜಯಸಾಕ್ಷಿ ಸುದ್ದಿ, ಹಾವೇರಿ: ಜೀವನದಲ್ಲಿ ಯಾರು ಕ್ರೀಡೆಯನ್ನು ಮುಂದುವರೆಸಿಕೊಂಡು ಹೋಗುತ್ತಾರೆಯೋ ಅವರು ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ಅಷ್ಟೇ ಅಲ್ಲ, ಎಂಥಹ ಸಂದರ್ಭದಲ್ಲಿಯೂ ಸುಖ-ದುಃಖವನ್ನು ಸಮನಾಗಿ ಸ್ವೀಕರಿಸುವ ಚೈತನ್ಯ ಕ್ರೀಡಾ ಮನೋಭಾವದಿಂದ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಹಾವೇರಿ ಜಿಲ್ಲೆಯ ಹಾನಗಲ್ಲ ನಗರದ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಂಸದ ಕ್ರೀಡಾ ಮಹೋತ್ಸವ 2025–26ರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಸಣ್ಣವರಿದ್ದಾಗ ಎಲ್ಲರೂ ಒಂದಿಲ್ಲೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ಆದರೆ, ಅದನ್ನು ಮುಂದುವರೆಸಿಕೊಂಡು ಹೋಗುವುದಿಲ್ಲ. ಕ್ರೀಡೆಯೊಂದಿಗಿನ ನಂಟು ಜೀವನದ ಅರ್ಧದಲ್ಲಿಯೇ ನಿಂತು ಹೋಗುತ್ತದೆ. ಕ್ರೀಡೆಗೆ ವಯಸ್ಸಿನ ಮಿತಿ ಇಲ್ಲ ಎಂದು ಇಲ್ಲಿಗೆ ಬಂದಾಗಲೇ ಗೊತ್ತಾಯಿತು. ವೈಭವಿ ಮಹಿಳಾ ಮಂಡಳದವರು ಸ್ಫೂರ್ತಿಯಿಂದ, ಬಹಳ ಉತ್ಸಾಹದಿಂದ ಆಡಿದರು. ಮನಸ್ಸಿದ್ದರೆ ಕ್ರೀಡೆಯನ್ನು ಯಾವ ವಯಸ್ಸಿನಲ್ಲಿಯಾದರೂ ಆಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಇಡೀ ದಿನ ಎಲ್ಲರೂ ಸಕ್ರಿಯರಾಗಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಕ್ರೀಡೆಯಿಂದ ಶಿಸ್ತು, ಚಾರಿತ್ರ್ಯ ಬರುತ್ತದೆ. ಅದಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಅಷ್ಟೇ ಮಹತ್ವ ಕೊಟ್ಟಿದ್ದಾರೆ. ಮೊದಲು ಫಿಟ್ ಇಂಡಿಯಾ, ನಂತರ ಖೇಲೋ ಇಂಡಿಯಾ, ಓಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಇತ್ಯಾದಿಗಳ ಪರಿಣಾಮದಿಂದ ಟೋಕಿಯೋ ಓಲಿಂಪಿಕ್ಸ್‌ನಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಸಂಸದರ ಕ್ರೀಡಾ ಮಹೋತ್ಸವ ಬಹಳ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಕ್ರೀಡಾ ಸ್ಫೂರ್ತಿಯನ್ನು ಹುಟ್ಟುಹಾಕಿದೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಕೊಟ್ಟು ಉತ್ತಮ ರೀತಿಯಲ್ಲಿ ನಡೆಸೋಣ ಎಂದು ಹೇಳಿದರು.
ಈ ಕ್ರೀಡೆ ಅತ್ಯಂತ ಯಶಸ್ವಿಯಾಗಲು ಕಾರಣರಾಗಿರುವ ಪಕ್ಷದ ಎಲ್ಲ ಮುಖಂಡರಿಗೆ, ಕ್ರೀಡಾಪಟುಗಳು, ರೆಫ್ರಿಯಾಗಿ ಬಂದಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಭಾರತೀಯ ಜನತಾ ಪಕ್ಷದ ಮಂಡಳದ ಅಧ್ಯಕ್ಷರಾದ ಮಹೇಶಕುಮಾರ ಕಮಡೊಳ್ಳಿ, ಮುಖಂಡರಾದ ಪದ್ಮನಾಭ ಕುಂದಾಪೂರ, ಬಿ.ಎಸ್. ಅಕ್ಕಿವಳ್ಳಿ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ, ರಾಘವೇಂದ್ರ ತಹಸೀಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣಾ ಇಳಿಗೇರ, ರಾಜಶೇಖರಗೌಡ ಕಟ್ಟೆಗೌಡ್ರ, ಚಂದ್ರಪ್ಪ ಹರಿಜನ, ಸಿದ್ದಲಿಂಗಪ್ಪ ಕಮಡೊಳ್ಳಿ, ಶಿವಲಿಂಗಪ್ಪ ತಲ್ಲೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕ್ರೀಡೆ ಜೀವನಕ್ಕೆ ಬಹಳ ಹತ್ತಿರ. ಸೋಲಬಾರದು ಎಂದು ಆಡುವುದು ಅಂದರೆ ಒಂದು ರಕ್ಷಣಾತ್ಮಕ ಆಟ, ಇನ್ನೊಂದು ಗೆಲ್ಲಲೇಬೇಕೆಂದು ಆಡುವುದು ಆಕ್ರಮಣಕಾರಿ ಆಟ. ಬದುಕಿನಲ್ಲಿ ಗೆಲ್ಲಲೇಬೇಕೆಂದು ಆಟ ಆಡಬೇಕು, ಅಂದಾಗ ಮಾತ್ರ ಯಶಸ್ಸು ಸಿಗುತ್ತದೆ. ಸಕಾರಾತ್ಮಕ ಮನಸ್ಸು, ಕಠಿಣ ಪರಿಶ್ರಮ, ಗುರಿ ಇದ್ದರೆ ಯಶಸ್ಸು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.



