ವ್ಯಕ್ತಿಯ ಸಾಮರ್ಥ್ಯ ಹೆಚ್ಚಿಸಲು ಕ್ರೀಡೆಗಳು ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿಯಲ್ಲಿ ಮೂಲಭೂತವಾಗಿ ಹಲವಾರು ಶಕ್ತಿ, ಸಾಮರ್ಥ್ಯಗಳು ಹುದುಗಿರುತ್ತವೆ. ಅವುಗಳ ವೃದ್ಧಿಗೆ ಪರಿಸರ ಸಹಕಾರಿಯಾಗಿದ್ದರೂ ಅಭಿವ್ಯಕ್ತಿಗೆ ಅವಕಾಶ ಬಹು ವಿರಳ. ಆದರೆ ಕ್ರೀಡೆಗಳು ಅಭಿವ್ಯಕ್ತಿಗೆ ಹೆಚ್ಚಿನ ಅವಕಾಶ ನೀಡುತ್ತವೆ. ಈ ಅವಕಾಶ ಉಪಯೋಗಿಸಿಕೊಳ್ಳುವ ಅಭಿಲಾಷೆಯಿಂದ ವ್ಯಕ್ತಿ ಕ್ರೀಡಾ ಸಾಧನೆಗೆ ಮುನ್ನಡೆಯುತ್ತಾನೆ. ವ್ಯಕ್ತಿಯ ಶಕ್ತಿ-ಸಾಮರ್ಥ್ಯ ಹೆಚ್ಚಿಸಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗಿವೆ ಎಂದು ತೋಂಟದ ಸಿದ್ಧೇಶ್ವರ ಕಲಾ, ವಾಣಿಜ್ಯ, ವಿಜ್ಞಾನ ಪ.ಪೂ ಕಾಲೇಜು ಪ್ರಾಚಾರ್ಯ ವಾಯ್.ಎಸ್. ಮತ್ತೂರ ತಿಳಿಸಿದರು.

Advertisement

ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆಸಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಇಂದಿನ ದಿನಮಾನದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕುಸಿಯುತ್ತಿದೆ. ಕಾರಣ ಹಲವಾರಿದ್ದರೂ ಪ್ರೋತ್ಸಾಹದ ಕೊರತೆ ಪ್ರಮುಖವಾಗಿದೆ. ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಸರಕಾರ, ಸಮಾಜ ಬಾಂಧವರು ಹೆಚ್ಚಿನ ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಕ್ರೀಡಾ ಕ್ಷೇತ್ರ ಶ್ರೀಮಂತಗೊಳ್ಳುವದೆಂದು ಹೇಳಿದರು.

2024-25ನೇ ಸಾಲಿನ ಪಿ.ಜಿ. ಡಿಪ್ಲೋಮಾ ಇನ್ ಯೋಗ ಸ್ಟಡೀಜ್ ಕೋರ್ಸ್ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಯೋಗ ಕ್ರೀಡಾಪಟು ಅಕ್ಷತಾ ಕೊಣ್ಣೂರ ಇವರನ್ನು ಸನ್ಮಾನಿಸಲಾಯಿತು. ಅನಿಲಕುಮಾರ ಎಸ್.ಬಿ., ಗೀತಾ ಪೂಜಾರ, ವಿದ್ಯಾ ಮುಳ್ಳಾಳ ಇವರು ಯೋಗ ಕೋರ್ಸ್ ಮತ್ತು ಯೋಗ ಕಾಲೇಜಿನ ಪರಿಶ್ರಮ ಕುರಿತು ತಮ್ಮ ಅನಿಸಿಕೆ ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಪಿ. ಗೌಳಿ, ಉಪನ್ಯಾಸಕಿ ಕಲಾವತಿ ಸಂಕನಗೌಡ್ರ, ಗುರುಬಸವ ಸಿ.ಬಿ.ಎಸ್.ಇ ಶಾಲೆಯ ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವ ಯೋಗ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು. ಸಪ್ನಾ ಹಿರೇಮಠ ಮತ್ತು ಸಂಗಡಿಗರು ಪ್ರಾರ್ಥನೆ ಹೇಳಿದರು. ಹೊನಕೇರಪ್ಪ ಮೇಟಿ ಸ್ವಾಗತಿಸಿದರು. ಅಶೋಕ ಬಾರಕೇರ ಕಾರ್ಯಕ್ರಮ ನಿರೂಪಿಸಿದರು. ನಿಂಬವ್ವಾ ತೇಲಸಂಗ ವಂದಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೆದ ಮಾತನಾಡಿ, ಕ್ರೀಡೆಗಳು ನಾಡಿನ ಅಭಿವೃದ್ಧಿಗೆ ಸಂಪನ್ಮೂಲಗಳಾಗಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡರೆ ಸದೃಢ, ಸಂಪದ್ಭರಿತ ನಾಡು ನಮ್ಮದಾಗುವುದು. ಹಾಕಿ ಮಾಂತ್ರಿಕ ಧ್ಯಾನಚಂದ್‌ರಂತಹ ಶ್ರೇಷ್ಠ ಕ್ರೀಡಾಪಟುಗಳು ನಮ್ಮ ದೇಶದ ಘನತೆ, ಗೌರಗಳನ್ನು ಹೆಚ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಶ್ರೇಷ್ಠ ಕ್ರೀಡಾಪಟುಗಳ ನಿರ್ಮಾಣ ಕಾರ್ಯ ಎಲ್ಲೆಡೆ ನಡೆದರೆ ಕ್ರೀಡಾ ದಿನಾಚರಣೆ ಸಾರ್ಥಗೊಳ್ಳುವದೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here