ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿರಲಿ: ಡಿಸಿ ಸಿ.ಎನ್. ಶ್ರೀಧರ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿರಲಿ. ಜಿಲ್ಲೆಯಲ್ಲಿ ಇರುವ ಕ್ರೀಡಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಸಹ ಉತ್ತಮ ನಡೆ. ಕ್ರೀಡೆಯಲ್ಲಿ ಸದಾ ಪಾಲ್ಗೊಳ್ಳಿ, ಸೋಲು-ಗೆಲವು ಇದ್ದೇ ಇರುತ್ತದೆ. ಶಕ್ತಿ, ಶಿಸ್ತು, ಉತ್ಸಾಹ ಹಾಗೂ ಆತ್ಮವಿಶ್ವಾಸದ ಪ್ರತೀಕವಾಗಿರುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದೇ ಪ್ರಮುಖ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನುಡಿದರು.

Advertisement

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ 14 ಮತ್ತು 17 ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ/ಬಾಲಕಿಯರ ಮೇಲಾಟಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮಾನಸಿಕ ಹಾಗೂ ದೈಹಿಕವಾಗಿ ಹೆಚ್ಚು ಚಟುವಟಿಕೆಯಿಂದ ಬಾಲ್ಯದ ಜೀವನ ಕೂಡಿರಬೇಕು. ಆಗ ಮಾತ್ರವೇ ಆತ್ಮವಿಶ್ವಾಸ ಬೆಳೆಯಲು ಸಾಧ್ಯ. ಜಿಲ್ಲೆಯಲ್ಲಿ ಕ್ರೀಡಾ ಸೌಲಭ್ಯಗಳು ಉತ್ತಮವಾಗಿವೆ. ಇವುಗಳನ್ನು ಬಳಸಿಕೊಂಡು ಕ್ರೀಡಾ ಸಾಧನೆ ಮಾಡಲು ಕರೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಜಿಲ್ಲಾ ಮಟ್ಟದ ಕ್ರೀಡಾಕೂಟವು ಎಲ್ಲರಲ್ಲಿ ಹೊಸ ಶಕ್ತಿ, ಉತ್ಸಾಹ, ಕ್ರೀಡಾ ಮನೋಭಾವ ತುಂಬಲಿ ಎಂಬ ಆಶಯದೊಂದಿಗೆ ಆಯೋಜಿಸಲಾಗಿದೆ. ಇಲ್ಲಿ ಪಾಲ್ಗೊಳ್ಳುವ ಎಲ್ಲ ವಿದ್ಯಾರ್ಥಿಗಳು ನಮ್ಮವರೇ. ತೀರ್ಪುಗಾರರು, ಆಯೋಜಕರು ಸರಿಯಾಗಿ ತೀರ್ಪು ನೀಡುವ ಮೂಲಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದರು.

ಜಿಲ್ಲಾ ಕೆಡಿಪಿ ಸದಸ್ಯರಾದ ಎಸ್.ಎನ್. ಬಳ್ಳಾರಿ ಮಾತನಾಡಿ, ಕ್ರೀಡಾಪಟುಗಳಿಗೆ ಪೂರಕವಾದ ವಾತಾವರಣ ಗದಗ ಜಿಲ್ಲೆಯಲ್ಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಹೆಚ್ಚಿನ ಸಾಧನೆ ಮಾಡಲಿ ಎಂಬುದು ಸಚಿವರ ಆಶಯವಾಗಿದೆ. ಹಾಕಿ ಕ್ರೀಡೆಯಲ್ಲಿ ಧ್ಯಾನ್ ಚಂದ್  ಅವರ ಆಟ ನೋಡಲು ಹಿಟ್ಲರ್ ಅವರು ಬರುತ್ತಿದ್ದರು ಎಂದರೆ ಅವರು ಅಂತಹ ವಿಶಿಷ್ಟವಾದ ಪ್ರದರ್ಶನ ನೀಡುತ್ತಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೆಮನಿ, ಡಾ. ಬಸವರಾಜ ಬಳ್ಳಾರಿ, ಬಿ.ಎಫ್. ಪೂಜಾರ, ವಿ.ಎಂ. ಹಿರೇಮಠ, ವಿ.ಎಫ್. ಕಲಕಂಬಿ, ಎಂ.ಕೆ. ಲಮಾಣಿ, ರಾಜು ಚವ್ಹಾಣ, ಶರಣಪ್ಪ ನಾವಳ್ಳಿ, ಎಲ್.ಸಿ. ಚೌಕಿಮಠ, ಎಸ್.ಡಿ. ಮುಳಗುಂದ, ರವಿರಾಜ ಪವಾರ, ವಿ.ವಿ. ನಡುವಿನಮನಿ, ಆರ್.ವಿ. ಶೆಟ್ಟೆಪ್ಪನವರ, ಶಂಕರ ಹಡಗಲಿ, ಶಿವಕುಮಾರ ಕುರಿಯವರ, ಶರಣು ಗೋಗೇರಿ, ವಸಂತ ಮಡ್ಲೂರ, ಎನ್.ಆರ್. ನಿಡಗುಂದಿ, ಎಂ.ವಿ. ಪಾಟೀಲ, ಎಲ್.ಡಿ. ಪಾಟೀಲ, ಆರ್.ಎಸ್. ನರೇಗಲ್, ಎಲ್.ಬಿ. ಹುಡೇದ, ಎಸ್.ಕೆ. ಮಂಗಳಗುಡ್ಡ ಸೇರಿದಂತೆ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೆಕೆಪಿಪಿಜಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ಎಂ.ಎಸ್. ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು. ಜೆ.ಬಿ. ಅಣ್ಣಿಗೇರಿ ವಂದಿಸಿದರು.

ಕ್ರೀಡಾಂಗಣದಲ್ಲಿ ಪಾದಾರ್ಪಣೆ ಮಾಡುವ ಪ್ರತಿಯೊಬ್ಬ ಕ್ರೀಡಾಪಟು ಗೆಲುವಿಗಿಂತ ಮಿಗಿಲಾಗಿ ಪ್ರಯತ್ನದ ಸಾರ್ಥಕತೆಯನ್ನು ಪ್ರದರ್ಶಿಸಲು ಬಂದಿದ್ದೇವೆ ಎಂದು ತಿಳಿದು ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಗೆಲ್ಲುವುದು ಗೌರವ, ಆದರೆ ಪಾಲ್ಗೊಳ್ಳುವುದು ಪ್ರೇರಣೆ ಎಂಬ ಮಾತನ್ನು ತಾವೆಲ್ಲರೂ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೃಢಪಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.


Spread the love

LEAVE A REPLY

Please enter your comment!
Please enter your name here