ಗದಗ: ದಸರಾ ಹಬ್ಬದ ಅಂಗವಾಗಿ ಬೆಟಗೇರಿಯಲ್ಲಿ ಶ್ರೀ ಕಾಳಿಕಾದೇವಿ ಉತ್ಸವ ಮೆರವಣಿಗೆ ಸಂಭ್ರಮ, ಸಡಗರದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಭಾಗವಹಿಸಿ ಶ್ರೀ ಕಾಳಿಕಾದೇವಿ ಮೂರ್ತಿಗೆ ಭಕ್ತಿಯಿಂದ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಸಮಾಜಕ್ಕೆ ವಿಶ್ವಕರ್ಮ ಬಂಧುಗಳ ಕೊಡುಗೆ ಅಪಾರವಾಗಿದೆ. ದಸರಾ ಹಬ್ಬದಲ್ಲಿ ಪ್ರತಿವರ್ಷ ಅವರು ವಿಜೃಂಭಣೆಯಿಂದ ಉತ್ಸವ ಮೂರ್ತಿ ಮೆರವಣಿಗೆ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ. ಮುಂದಿನ ದಿನಮಾನಗಳಲ್ಲಿ ಇದೇ ರೀತಿಯ ಯಶಸ್ವಿ ಕಾರ್ಯಕ್ರಮಗಳನ್ನು ಅವರು ನಡೆಸಲಿ ಅಂತ ಬಸವರಾಜ ಬಳ್ಳಾರಿ ಹಾರೈಸಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ ನೋಡುಗರ ಗಮನ ಸೆಳೆಯಿತು. ಮಹಿಳೆಯರು ಹಾಗೂ ಪುರುಷರು ಭರ್ಜರಿಯಾಗಿ ಡೊಳ್ಳು ಬಾರಿಸಿ ನೃತ್ಯ ಮಾಡಿದರು. ಅಲ್ಲದೆ ಕೆಲವು ಸಾಹಸ ಪ್ರದರ್ಶನಗಳನ್ನು ಕೂಡ ಪ್ರದರ್ಶನ ಮಾಡಲಾಯಿತು. ಈ ವೇಳೆ ವಿಶ್ವಕರ್ಮ ಸಮುದಾಯದ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.