ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಪ್ರತಿ ವರ್ಷದಂತೆ ಗೌರಿ ಹುಣ್ಣಿಮೆಯ ದಿನವಾದ ನ.೫ರಂದು ಶ್ರೀ ಮರಿಯಮ್ಮದೇವಿಯ ಹಾಗೂ ಶ್ರೀ ಸ್ವಾರಮ್ಮದೇವಿಯ 71ನೇ ವರ್ಷದ ಅಗ್ನಿ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮದ ನಿಮಿತ್ತ ಈಗಾಗಲೇ ಶ್ರೀ ಮರಿಯಮ್ಮದೇವಿಯ ದೇವಸ್ಥಾನದಿಂದ ಹಳ್ಳದ ದುರಗಮ್ಮ ದೇವಿ ದೇವಸ್ಥಾನದವರೆಗೂ ವಿದ್ಯುತ್ ದೀಪಾಲಂಕಾರ ಝಗಮಗಿಸುತ್ತಿದೆ. ನ.೪ರಂದು ಇಡೀ ಪಟ್ಟಣದಾದ್ಯಂತ ಹಸಿರು ತೋರಣಗಳಿಂದ ಸಿಂಗಾರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ ದೇವಸ್ಥಾನದಿಂದ ದುರಗಮ್ಮದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ದೇವಿಯನ್ನು ಹೊತ್ತ ಪಲ್ಲಕ್ಕಿ ಉತ್ಸವವು ಕೆಳಗೇರಿ ಓಣಿ, ಶೆಟ್ಟರ ಓಣಿ, ಬಜಾರ್ ರಸ್ತೆ, ಬಸವೇಶ್ವರ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತಗಳ ಮೂಲಕ ಭವ್ಯ ಮೆರವಣಿಗೆ ನಡೆಯಲಿದ್ದು, ವಿವಿಧ ಸ್ಥಳಗಳಿಂದ ಡೊಳ್ಳಿನ ಮಜಲು, ನಂದೀಧ್ವಜ ಮತ್ತು ಸಮ್ಮಾಳಗಳ ಮೆರವಣಿಗೆಗೆ ಸಾಥ್ ನೀಡಲಿವೆ.
ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಎದುರುಗಡೆ ನಿರ್ಮಿಸಿರುವ ಅಗ್ನಿಕುಂಡದಲ್ಲಿ ಭಕ್ತರು ಅಗ್ನಿ ಹಾಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಲಿದ್ದಾರೆ.



