ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಗೌರಿ ಹುಣ್ಣಿಮೆಯ ದಿನವಾದ ಬುಧವಾರ ಶ್ರೀ ಮರಿಯಮ್ಮದೇವಿಯ ಹಾಗೂ ಶ್ರೀ ಸ್ವಾರೆಮ್ಮದೇವಿಯ 71ನೇ ವರ್ಷದ ಅಗ್ನಿ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಶ್ರೀ ಮರಿಯಮ್ಮದೇವಿ, ಸ್ವಾರೆಮ್ಮದೇವಿಯ ಪಲ್ಲಕ್ಕಿ ಸಮೇತ ಕೆಳಗೇರಿ ಓಣಿಯಲ್ಲಿರುವ ದುರ್ಗಮ್ಮದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿ ಉತ್ಸವವು ಕೆಳಗೇರಿ ಓಣಿ, ಶೆಟ್ಟರ ಓಣಿ, ಬಜಾರ್ ರಸ್ತೆ, ಬಸವೇಶ್ವರ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ನೆಹರು ವೃತ್ತಗಳ ಮೂಲಕ ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನವನ್ನು ತಲುಪಿತು. ವಿವಿಧ ಸ್ಥಳಗಳಿಂದ ಡೊಳ್ಳಿನ ಮೇಳ, ನಂದೀಧ್ವಜ ಮತ್ತು ಸಮ್ಮೇಳಗಳು ಮೆರವಣಿಗೆಗೆ ಸಾಥ್ ನೀಡಿದವು.
12 ಗಂಟೆಯ ಹೊತ್ತಿಗೆ ದೇವಸ್ಥಾನದ ಎದುರುಗಡೆ ನಿರ್ಮಿಸಿರುವ ಅಗ್ನಿಕುಂಡದಲ್ಲಿ ಭಕ್ತರು ಅಗ್ನಿ ಹಾಯುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಅಗ್ನಿ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.


