ವಿಜಯಸಾಕ್ಷಿ ಸುದ್ದಿ, ಭದ್ರಾವತಿ : ಬದುಕು ಭಗವಂತನ ಕೊಡುಗೆ. ಅರಿವು-ಆದರ್ಶಗಳಿಂದ ಬದುಕು ಸಮೃದ್ಧಿಗೊಳ್ಳಬೇಕು. ಸುಖ, ಶಾಂತಿದಾಯಕ ಬದುಕಿಗೆ ಧರ್ಮ ಪರಿಪಾಲನೆ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಅಂಗವಾಗಿ ನಡೆದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮದಲ್ಲಿರುವ ಉದಾತ್ತ ತತ್ವಗಳು ಜೀವನದ ಶ್ರೇಯಸ್ಸಿಗೆ ಕಾರಣವಾಗಿವೆ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಮಲಗಿದರೆ ಬಾಳು ಬಂಧನಕಾರಿ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಗುರಿಯಿಲ್ಲದ, ಗುರಿ ಸಾಧಿಸದ ಜೀವನ ವ್ಯರ್ಥ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳು ಸಕಲರ ಬಾಳಿಗೆ ಬೆಳಕು ತೋರಿವೆ. ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸುವ ಉದಾತ್ತ ಗುರಿ ಹೊಂದಿದೆ ಎಂದ ಅವರು, ತತ್ವ ತ್ರಯಗಳನ್ನು ಮನುಷ್ಯ ಆಚರಿಸಿ ಜೀವನದಲ್ಲಿ ಉನ್ನತಿಯನ್ನು ಕಾಣಬೇಕಾಗಿದೆ. ಕೂಡ್ಲಿಗೆರೆ ಗ್ರಾಮದಲ್ಲಿ ನಿರ್ಮಿಸಿದ ನೂತನ ಶ್ರೀ ಬಸವೇಶ್ವರಸ್ವಾಮಿ ಸುಂದರ ದೇವಾಲಯ ಕಂಡು ತುಂಬಾ ಸಂತೋಷವಾಗಿದೆ ಎಂದರು.
ಶಿಲ್ಪಿಗಳಿಗೆ, ದೇವಸ್ಥಾನ ಗೋಪುರ-ಕಟ್ಟಡ ನಿರ್ಮಾಣಕಾರರಿಗೆ, ಮರದ ಕೆಲಸಗಾರರಿಗೆ, ದಾನಿಗಳಿಗೆ, ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಆಶೀರ್ವದಿಸಿದರು. ಚಿಕ್ಕಮಗಳೂರಿನ ಚಂದ್ರಶೇಖರ ನಾರಣಾಪುರ ಉಪನ್ಯಾಸವನ್ನಿತ್ತರು. ಗಂಜಿಗಟ್ಟಿ ಕೃಷ್ಣಮೂರ್ತಿ ಇವರಿಂದ ಭಕ್ತಿ ಗೀತೆ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಜರುಗಿದ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಆರತಿ ಹಿಡಿದ ಮುತ್ತೈದೆಯರು, ಕುಂಭ ಹೊತ್ತ ಮಹಿಳೆಯರು ಪಾಲ್ಗೊಂಡಿದ್ದರು. ಸಕಲ ಬಿರುದಾವಳಿಗಳೊಂದಿಗೆ, ವಿವಿಧ ವಾದ್ಯ ವೈಭವಗಳೊಂದಿಗೆ ಚನ್ನಗಿರಿ ರಸ್ತೆಯ ಶ್ರೀ ಹರಿಹರೇಶ್ವರ ಮಹಾದ್ವಾರದಿಂದ ಕೂಡ್ಲಿಗೆರೆಯ ರಾಜಬೀದಿಗಳಲ್ಲಿ ಸಂಚರಿಸಿದ ಉತ್ಸವ ಶ್ರೀ ಬಸವೇಶ್ವರ ದೇವಾಲಯವನ್ನು ತಲುಪಿತು. ಕೂಡ್ಲಿಗೆರೆ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿಯವರಿಂದ ಪ್ರಸಾದ ಸೇವೆ ಜರುಗಿತು.
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಸಮಾರಂಭ ಉದ್ಘಾಟಿಸಿ ಮಾತನಾಡಿ, ಧರ್ಮಾಚರಣೆ ಇಲ್ಲದಿದ್ದರೆ ಜೀವನದಲ್ಲಿ ಶಾಂತಿ ಕಾಣದು. ನೆಮ್ಮದಿಯ ಆದರ್ಶ ಬದುಕಿಗೆ ಧರ್ಮವೊಂದೇ ಆಶಾಕಿರಣ ಎಂದರು. ಎಡೆಯೂರು ರೇಣುಕ ಶಿವಾಚಾರ್ಯರು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.