ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ : ರಂಭಾಪುರಿ ಜಗದ್ಗುರುಗಳು

0
Sri Rambhapuri Jagadguru's Pura Entry and Dharma Awareness Ceremony
????????????
Spread the love

ವಿಜಯಸಾಕ್ಷಿ ಸುದ್ದಿ, ಆಲೂರು : ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖ ಬಯಸುವ ಮನುಷ್ಯ ಧರ್ಮ ಪರಿಪಾಲನೆ ಮಾಡುವುದನ್ನು ಮರೆಯುತ್ತಾನೆ. ಆದರೆ ಸುಖ-ಶಾಂತಿಯ ಬದುಕಿಗೆ ಧರ್ಮವೇ ಮೂಲ ಎಂಬುದನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದಲ್ಲಿ ಆಲೂರು ತಾಲೂಕ ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ ಶ್ರೀ ರಂಭಾಪುರಿ ಜಗದ್ಗುರುಗಳ ಪುರ ಪ್ರವೇಶ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಮನುಷ್ಯನ ನಂಬಿಕೆಯ ಮೇಲೆ ನಿಂತುಕೊಂಡಿವೆ. ನಂಬಿಕೆಯೇ ಜೀವನದ ಮೂಲ ಸೆಲೆ. ನಂಬಿಕೆ ಇದ್ದರೆ ಏನೆಲ್ಲಾ ಇದೆ. ನಂಬಿಕೆ ಇಲ್ಲದವರಿಗೆ ಯಾವುದೂ ಇಲ್ಲ. ಕಣ್ಣು ಚೆನ್ನಾಗಿದ್ದರೆ ಜಗ ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನತೆಗೆ ಚೆನ್ನಾಗಿ ಕಾಣುತ್ತೇವೆ. ವಿದ್ಯೆ, ದುಡಿಮೆ ಮತ್ತು ತಾಳ್ಮೆ ಜೀವನದ ಶ್ರೇಯಸ್ಸಿಗೆ ಅಡಿಪಾಯ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ.
ಸಕಲ ಜೀವಾತ್ಮರಿಗೆ ಸದಾ ಲೇಸನ್ನೇ ಬಯಸಿದ ವೀರಶೈವ ಧರ್ಮ ಬಹಳ ಪ್ರಾಚೀನವಾದ ಧರ್ಮ. ಇದಕ್ಕೊಂದು ಇತಿಹಾಸ ಭವ್ಯ ಪರಂಪರೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಶಿವಾದ್ವೈತ ತತ್ವ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದ ಇತಿಹಾಸವಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್. ಗುರುದೇವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜೀವ ಜಗತ್ತಿನ ಶ್ರೇಯಸ್ಸಿಗೆ ಧರ್ಮಾಚರಣೆ ಮುಖ್ಯ. ಧರ್ಮ ಪಾಲನೆ ಮಾಡದಿದ್ದರೆ ಆಘಾತ ತಪ್ಪಿದ್ದಲ್ಲ. ವೀರಶೈವ ಧರ್ಮದ ಪಂಚ ಪೀಠಗಳು ಯಾವಾಗಲೂ ಧರ್ಮ ಸಂಸ್ಕೃತಿಯ ಸಂವರ್ಧನೆಗಾಗಿ ಸದಾ ಶ್ರಮಿಸುತ್ತಿವೆ. ಶ್ರೀ ರಂಭಾಪುರಿ ಜಗದ್ಗುರುಗಳ ದಿವ್ಯ ಸಂದೇಶ ನಮ್ಮೆಲ್ಲರ ಬದುಕಿಗೆ ದಿಕ್ಸೂಚಿಯಾಗಿದೆ ಎಂದರು.
ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ ಸಮಾರಂಭದಲ್ಲಿ ಸಂಕಲಾಪುರ ಮಠದ ಧರ್ಮರಾಜೇಂದ್ರ ಸ್ವಾಮಿಗಳು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಯಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಆಲೂರು ಶಾಸಕ ಸಿಮೆಂಟ್ ಮಂಜು, ಅ.ಭಾ.ವೀ.ಮ ರಾಷ್ಟ್ರೀಯ ಕಾರ್ಯಕಾರಿಣಿ ಘಟಕದ ಸದಸ್ಯ ಸಿದ್ಧೇಶ್ ನಾಗೇಂದ್ರ, ಮಲೆನಾಡು ವೀರಶೈವ ಸಂಘದ ಅಧ್ಯಕ್ಷ ದೇವರಾಜು, ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಬೇಲೂರು ಶಿವಕುಮಾರ ಸ್ವಾಮೀಜಿ, ಸಮುದಾಯ ಭವನದ ಮಾಜಿ ಅಧ್ಯಕ್ಷ ಎಮ್.ಎಸ್. ಪರಮಶಿವಪ್ಪ, ಬಾಳ್ಳುಪೇಟೆಯ ಬಿ.ಎಸ್. ಮಲ್ಲಿಕಾರ್ಜುನ್, ತಾಲೂಕಾ ವೀ.ಲಿಂ ಸಂಘದ ಮಾಜಿ ಅಧ್ಯಕ್ಷ ಕೆ.ಎ. ಕೊಟ್ಟೂರಪ್ಪ, ಮಲೆನಾಡು ಅ.ಮಂಡಳಿ ಮಾಜಿ ಅಧ್ಯಕ್ಷ ಹೆಚ್.ಪಿ. ಮೋಹನ್, ಹೆಚ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಜಗದೀಶ ಕಬ್ಬಿನಹಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ತಾಲ್ಲೂಕಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ರೇಣುಕ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಾರ್ವತಿ ಮಲ್ಲೇಶ ಸಂಗಡಿಗರಿಂದ ಪ್ರಾರ್ಥನೆ, ಡಾ. ಎಂ.ಈ. ಜಯರಾಜ್‌ರಿಂದ ಸ್ವಾಗತ ಜರುಗಿತು. ಶಾಂತಾ ಆನಂದ ನಿರೂಪಿಸಿದರು. ಆರ್.ಎಸ್. ನಟರಾಜು ವಂದನಾರ್ಪಣೆ ಸಲ್ಲಿಸಿದರು.
ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ವೀರಶೈವ ಧರ್ಮ ಅದ್ಭುತ ಕೊಡುಗೆಯನ್ನು ಕೊಟ್ಟಿದೆ. ವೈಚಾರಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಧರ್ಮ ಸಂಸ್ಕೃತಿಯ ಬಗೆಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿರುವ ಕಾರಣ ಜಗದಲ್ಲಿ ಅಶಾಂತಿ, ಸಂಘರ್ಷ ಹೆಚ್ಚುತ್ತಿರುವುದನ್ನು ಕಾಣುತ್ತೇವೆ. ದ್ವೇಷ ಮರೆತು ಪ್ರೀತಿ, ವಿಶ್ವಾಸ ಹೆಚ್ಚಿದಾಗ ಜಗದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದು ರಂಭಾಪುರಿ ಶ್ರೀಗಳು ನುಡಿದರು.

Spread the love
Advertisement

LEAVE A REPLY

Please enter your comment!
Please enter your name here