ವಿಜಯಸಾಕ್ಷಿ ಸುದ್ದಿ, ಗದಗ : ಜಗದ್ಗುರು ಪಂಚಾಚಾರ್ಯ ಸೇವಾ ಸಂಘ, ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟ್, ಪಾಠಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ ಯೋಗ ಶಾಲೆ ಸಹಯೋಗದಲ್ಲಿ ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವದ ಅಂಗವಾಗಿ ಮಾ. 18ರಿಂದ 22ರವರೆಗೆ `ಶ್ರೀ ರೇಣುಕ ದರ್ಶನ’ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಳಗುಂದ ನಾಕಾ ಬಳಿಯ ರೇಣುಕ ನಗರದ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಮಾ. 18ರಿಂದ 5 ದಿನಗಳ ಕಾಲ ಪ್ರತಿದಿನ ಸಂಜೆ 6.30ಕ್ಕೆ ಹುಬ್ಬಳ್ಳಿಯ ನವನಗರದ ಕಾಶಿ ಖಾಸಾ ಶಾಖಾ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ.
ಮಾ. 18ರಂದು ಸಂಜೆ 6.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರೇಣುಕ ಮಂದಿರದ ಚಂದ್ರಶೇಖರ ದೇವರು ನೇತೃತ್ವ ವಹಿಸುವರು. ದತ್ತಾ ಡೆವಲಪರ್ಸ್ ಎಂಡಿ ಕಿರಣ ಭೂಮಾ ಉದ್ಘಾಟಿಸುವರು.
ಮಾ. 19ರ ಕಾರ್ಯಕ್ರಮದಲ್ಲಿ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಯಾಗಿ ಡಿ.ಆರ್. ಪಾಟೀಲ ಪಾಲ್ಗೊಳ್ಳುವರು. ಮಾ. 20ರಂದು ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಮಾ. 21ರಂದು ಮಲ್ಲಸಮುದ್ರ ಓಂಕಾರೇಶ್ವರ ಮಠದ ಫಕ್ಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. 22ರಂದು ನವಲಗುಂದ ತಾಲೂಕಿನ ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ, ರಮೇಶ ಅಬ್ಬಿಗೇರಿ, ಸುರೇಶ ಅಬ್ಬಿಗೇರಿ, ರಾಜು ಮುಧೋಳ, ವಿಜಯಕುಮಾರ ಹಿರೇಮಠ, ಸಿದ್ದಲಿಂಗಪ್ಪ ಚಳಗೇರಿ, ಮಂಗಳಾ ಬೇಲೇರಿ, ಜ್ಯೋತಿ ಚಳಗೇರಿ ಇದ್ದರು.
ಮಾ. 22ರಂದು ಸಂಜೆ 5ಕ್ಕೆ ರೇಣುಕ ಮಂದಿರದಿಂದ ಭಜನೆ, ಡೊಳ್ಳು, ಸಕಲ ವಾದ್ಯ ವೈಭವದೊಡನೆ ರಥೋತ್ಸವ ಪಾಲಿಕೆ ಹಾಗೂ ರೇಣುಕಾಚಾರ್ಯ ಭಾವಚಿತ್ರ ಮೆರವಣಿಗೆ ಸಾಗುವುದು. ನಂತರ ರಥೋತ್ಸವ ನೆರವೇರಲಿದೆ ಎಂದು ಚಂದ್ರು ಬಾಳಿಹಳ್ಳಿಮಠ ಮಾಹಿತಿ ನೀಡಿದರು.