ವಿಜಯಸಾಕ್ಷಿ ಸುದ್ದಿ, ಗದಗ : ಪಾರಮಾರ್ಥಿಕ ಮತ್ತು ಪ್ರಾಪಂಚಿಕ ಜೀವನಕ್ಕೆ ಶ್ರೀ ಸಾಯಿ ಸಚ್ಚರಿತ್ರೆ ದಾರಿದೀಪವಾಗಬಲ್ಲದು ಎಂದು ಗದುಗಿನ ಖ್ಯಾತ ವೈದ್ಯ, ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಗದಗ ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 20ರವರೆಗೆ ನಡೆಯಲಿರುವ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯ ಮೊದಲ ದಿನದ ಪ್ರವಚನಕ್ಕೆ ಪೀಠಿಕೆ ಹಾಕಿ ಕೆಲವು ಅಧ್ಯಾಯಗಳನ್ನು ವಿಶ್ಲೇಷಿಸಿದರು.
ಶ್ರೀ ಸಾಯಿ ಸಚ್ಚರಿತ್ರೆ ಪಠಣದಿಂದ, ಆಲಿಕೆಯಿಂದ ಪಾಪಗಳು ನಾಶವಾಗುತ್ತವೆ. ಯೋಗಿಗಳ ಜೀವನ ಆಧ್ಯಾತ್ಮಿಕ ಮತ್ತು ಸಾಧನೆಗೆ ರಾಜಮಾರ್ಗವಾಗಿವೆ. ಸಾಧಕರಿಗೆ ಯೋಗಿಗಳ ಜೀವನ ಪಾಠವೇ ಸಿಲೇಬಸ್ ಇದ್ದಂತೆ ಎಂದರು.
ಸಂಸಾರವನ್ನು ಸಾಗರಕ್ಕೆ ಹೊಲಿಕೆ ಮಾಡಲಾಗುತ್ತಿದೆ. ಈ ಮೊದಲು ಸಮುದ್ರದಲ್ಲಿ ದಿಕ್ಸೂಚಿಯಾಗಿ ಲೈಟ್‌ಹೌಸ್(ದೀಪ ಮನೆ)ಗಳು ಇರುತ್ತಿದ್ದವು. ದೀಪಮನೆಗಳ ದಿಕ್ಸೂಚಿಯನ್ನು ಅನುಸರಿಸಿ ನಾವಿಕರು ತಮ್ಮ ಹಡಗು ಚಲಿಸಬೇಕಾದ ಮಾರ್ಗವನ್ನು ನಿರ್ಧರಿಸುವ ಹಾಗೆ, ಯೋಗಿಗಳ ಜೀವನ ಕಥೆಯು ಸಂಸಾರದ ಸಾಗರದಲ್ಲಿರುವವರಿಗೆ ದಾರಿದೀಪ ಇದ್ದ ಹಾಗೆ ಎಂದರು.
ಯಾವಾಗ ನಾವು ನಮ್ಮ ಧಾರ್ಮಿಕ ಕರ್ತವ್ಯಗಳನ್ನು ಮರೆಯುತ್ತೇವೆಯೋ, ಮತೀಯ ಕಲಹಗಳು ಪ್ರಾರಂಭವಾಗುವವೋ ಆವಾಗ ಯೋಗಿಗಳು ಹುಟ್ಟಿ ಬರುವರು. ಯೋಗಿಗಳ ಮಾರ್ಗದರ್ಶನದಲ್ಲಿ ಸಮಾಜ ಸನ್ಮಾರ್ಗದೆಡೆಗೆ ಮುನ್ನಡೆಯಲು ಸಹಕಾರಿ ಎಂದರು.
ಸಾಯಿಬಾಬಾ ಧುನಿಗೆ ತಲಾ 25 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ಸಿದ್ಧಮಲ್ಲಪ್ಪ ಶ್ರೀಶೈಲಪ್ಪ ಕಾವೇರಿ, ವೀರೇಶ ಸಾಲಿಮಠ, ತಲಾ 11 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ರಾಮಣ್ಣ ಆರ್.ಕಾಶಪ್ಪನವರ, ರುದ್ರಪ್ಪ ಚಂದ್ರಪ್ಪ ಅರಳಿ ಹಾಗೂ ಪ್ರಸಾದ ಸೇವೆ ವಹಿಸಿಕೊಂಡಿದ್ದ ವ್ಹಿ.ಆರ್. ಕುಂಬಾರ, ರಾಮಣ್ಣ ಕಾಶಪ್ಪನವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
ಧುನಿಗೆ ದೇಣಿಗೆಯ ಧ್ವನಿ
ಶಿರಡಿಯಲ್ಲಿರುವ ಧುನಿ ಮಾದರಿಯನ್ನು ಗದುಗಿನ ಶಿರಡಿ ಬಾಬಾ ಮಂದಿರ ಬಳಿ ನಿರ್ಮಿಸಲು ಸಂಕಲ್ಪಿಸಲಾಗಿದ್ದು, ಈಗಾಗಲೇ ಭೂಮಿಪೂಜಾ ಕಾರ್ಯವೂ ಆಗಿದೆ. ಈ ಕಾರ್ಯಕ್ಕೆ ದಿ. ಗಂಗಣ್ಣ ಕೋಟಿ ಅವರು 50 ಸಾವಿರ ರೂ.ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ದೇಣಿಗೆ ಸಂಗ್ರಹಕ್ಕೆ ಮುನ್ನುಡಿ ಬರೆದಿದ್ದಾರೆ. ಇಂತಹ ಮಹತ್ವದ ಕಾರ್ಯಕ್ಕೆ ಭಕ್ತಾಧಿಗಳು ಕೈಜೋಡಿಸಬೇಕೆಂದು ಡಾ. ಎಸ್.ಬಿ. ಶೆಟ್ಟರ ವಿನಂತಿಸಿದರು.
Advertisement