ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಮೇ.6ರಿಂದ 4 ದಿನಗಳ ಕಾಲ ನಡೆಯಲಿದೆ. ಜಾತ್ರೆಯ ನಿಮಿತ್ತ ಸಾಂಪ್ರದಾಯಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ ಹೇಳಿದರು.
ಈ ಕುರಿತು ದೇವಸ್ಥಾನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ ನಿಮಿತ್ತ ಮೇ. 6ರಂದು ಸಂಜೆ 7 ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಶ್ರೀ ಲಕ್ಷ್ಮೀ ದೇವರ ಪೂಜೆ ರಥದ ಹತ್ತಿರ ನೆರವೇರಲಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನದ ಜಾತ್ರೆಯ ರಥೋತ್ಸವ ಮೇ. 7ರಂದು ಸಂಜೆ 5.30 ಗಂಟೆಗೆ ಸಕಲ ವಾದ್ಯ ವೈಭವದೊಂದಿಗೆ ನಡೆಯಲಿದೆ. ಮೇ. 8ರಂದು ಸಂಜೆ 5.30 ಗಂಟೆಗೆ ಕಡುಬಿನ ಕಾಳಗ ಹಾಗೂ ಮೇ. 9ರಂದು 7 ಗಂಟೆಗೆ ದೇವರ ಓಕಳಿ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಸೇವಾ ಟ್ರಸ್ಟ್ ಕಮಿಟಿ ನಿಕಟಪೂರ್ವ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಪೂರ್ಣಾಜಿ ಖರಾಟೆ ಮಾತನಾಡಿ, ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಅನೂಕೂಲವಾಗುವಂತೆ ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ, ಪ್ರಸಾದ ಸೇರಿದಂತೆ ಯಾವುದೇ ಸಮಸ್ಯೆಯಾಗದಂತೆ ವಿಶೇಷ ಕಾಳಜಿ ವಹಿಸಲಾಗಿದ್ದು, ಜಾತ್ರಾ ಕಮಿಟಿ, ಅರ್ಚಕರ ಕಮಿಟಿ, ಟ್ರಸ್ಟ್ ಕಮಿಟಿ ಸೇರಿದಂತೆ ಯುವಕರು, ಹಿರಿಯರು ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಿದ್ಧರಾಗಿದ್ದಾರೆ. ನಮ್ಮ ಹೆಮ್ಮೆಯ ದೇವಸ್ಥಾನದ ಜಾತ್ರೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಮನವಿ ಮಾಡಿದರು.
ಅರ್ಚಕರ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ, ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ನೂತನ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ ಮಾತನಾಡಿ, ಜಾತ್ರೆಯ ಸಿದ್ಧತೆಗಳ ಜೊತೆಗೆ ಈ ಬಾರಿ ಜನರಿಗೆ ನೇರವಾಗಿ ಸೋಮೇಶ್ವರನ ದರ್ಶನಕ್ಕೆ ಪೂರ್ವ ಬಾಗಿಲಿನಿಂದ ಬಿಡುವ ವ್ಯವಸ್ಥೆ ಮಾಡಲಾಗಿದೆ. ಪೂರ್ವ ಬಾಗಿಲಿನಿಂದ ಬಂದು ಉತ್ತರ ಮತ್ತು ದಕ್ಷಿಣ ಬಾಗಿಲುಗಳ ಮೂಲಕ ಹೊರ ಹೋಗುವಂತೆ ವ್ಯವಸ್ಥೆ ಮಾಡುವ ಉದ್ದೇಶವಿದ್ದು, ಜನರು ಸಹಕಾರದಿಂದ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಬಳ್ಳೊಳ್ಳಿ, ಶಿವಯೋಗಿ ಅಂಕಲಕೋಟಿ, ಕಾಶಪ್ಪ ಮುಳಗುಂದ, ಎನ್.ಆರ್. ಸಾತಪೂತೆ, ಪ್ರಕಾಶ ಮುಳಗುಂದ, ಮಯೂರಗೌಡ ಪಾಟೀಲ, ಸುರೇಶ ರಾಚನಾಯ್ಕರ್, ವೀರಣ್ಣ ಮುಳಗುಂದ, ಬಂಗಾರಪ್ಪ ಮುಳಗುಂದ, ಭರಮಣ್ಣ ಕೊಡ್ಲಿ ಸೇರಿದಂತೆ ಅನೇಕರಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ 7ರಿಂದ 9ರವರೆಗೆ ಮೂರು ದಿನಗಳ ಕಾಲ ಪ್ರಸಾದ ಸೇವೆ ನಡೆಯಲಿದೆ. ಅಲ್ಲದೆ ಶ್ರೀ ಸೋಮೇಶ್ವರನಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾವಾ ಕಾರ್ಯಗಳಿಗಾಗಿ ಅರ್ಚಕರನ್ನು ಸಂಪರ್ಕಿಸಬಹುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.



