ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ಮಂಗಳವಾರ ಸಂಜೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ಜರುಗಿತು.
ಎ.20ರಂದು ಜಾತ್ರಾ ಮಹೋತ್ಸವದ ನಿಮಿತ್ತ ನೂತನ ಗಡ್ಡಿ ರಥಕ್ಕೆ ಬನ್ನಿಕೊಪ್ಪ ಬ್ರಹ್ನನ್ಮಠ, ಮೈಸೂರು ಜಪದಕಟ್ಟೆಯ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಚಾಲನೆಯನ್ನು ನೀಡಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮೀಜಿ, ವೀರಭದ್ರ ದೇವರು ದುಷ್ಟರನ್ನು ಶಿಕ್ಷಿಸುತ್ತಾ, ಶಿಷ್ಟರನ್ನು ರಕ್ಷಿಸುತ್ತಾ, ಶಿವಭಕ್ತಿಯ ಆಂದೋಲನವನ್ನು ಸೃಷ್ಟಿಸಿದವನಾಗಿದ್ದಾನೆ. ಭೂಲೋಕದಲ್ಲಿ ಅನೇಕ ಸ್ಥಳಗಳಲ್ಲಿ ನೆಲೆಸಿ ಭಕ್ತರ ಕಾಮಧೇನುವಾಗಿದ್ದಾರೆ. ಬೆಳ್ಳಟ್ಟಿಯಲ್ಲೂ ಸಹ ವೀರಭದ್ರ ದೇವರ ಭಕ್ತರು ಇಚ್ಛಾಶಕ್ತಿಯಿಂದ ನೂತನ ಬೃಹತ್ ಗಡ್ಡಿ ರಥವನ್ನು ನಿರ್ಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ ಎಂದರು.
ಬೆಳ್ಳಟ್ಟಿ ಮತ್ತು ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರೆಯ ಮಹೋತ್ಸವದ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿದ್ದರು.