ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಜ್ಞಾನದ ಕಗ್ಗತ್ತಲನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಪಸರಿಸುವುದೇ ನಿಜವಾದ ಕಾರ್ತಿಕೋತ್ಸವವಾಗಿದ್ದು, ಶಿರಹಟ್ಟಿ ಪಟ್ಟಣದಲ್ಲಿ ಕಳೆದ 43 ವರ್ಷಗಳಿಂದ ಪೇಟೆ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವವನ್ನು ಆಚರಿಸುತ್ತಾ ಬರುವುದರ ಜೊತೆಗೆ ಕಲಾವಿದರನ್ನು, ಸಮಾಜದಲ್ಲಿ ಸಾಧನೆಗೈದವರಿಗೆ ಸತ್ಕರಿಸುವ ಕಾರ್ಯ ಶ್ಲಾಘನೀಯವಾದದ್ದು ಎಂದು ಮಲ್ಲಸಮುದ್ರ-ಕಳಸಾಪೂರದ ಜ.ಫಕೀರೇಶ್ವರ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ಪಟ್ಟಣದಲ್ಲಿ ಪೇಟೆ ಶ್ರೀ ವೀರಭದ್ರೇಶ್ವರ ದೇವರ 43ನೇ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮವೂ ನಮ್ಮನ್ನು ರಕ್ಷಿಸುತ್ತದೆ. ದೀಪ ಎತ್ತರದಲ್ಲಿದ್ದರಷ್ಟೇ ಎಲ್ಲ ಕಡೆಗೂ ಬೆಳಕು ಬರಲು ಸಾಧ್ಯ. ಹಾಗೆಯೇ ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ ಸಹ ಧರ್ಮ ಮಾರ್ಗದಲ್ಲಿ ನಡೆಯಬೇಕು, ತಂದೆ-ತಾಯಿಗೆ ವಿಧೇಯನಾಗಿರಬೇಕು. ಕಾರ್ತಿಕೋತ್ಸವ ನೆಪ ಮಾತ್ರ ಆಗಬಾರದು, ಅದನ್ನು ಸಾರ್ಥಕಗೊಳಿಸುವುದಕ್ಕಾಗಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು. ಈಗಿರುವ ದೇವಸ್ಥಾನ ಚಿಕ್ಕದಾಗಿದ್ದು ಮುಂದಿನ ದಿನಗಳಲ್ಲಿ ದೇವಸ್ಥಾನಕ್ಕೆ ಜಾಗ ಖರೀದಿಸಿ ಬೃಹತ್ ದೇವಸ್ಥಾನ ನಿರ್ಮಿಸಲು ಎಲ್ಲರೂ ಮುಂದಾಗಬೇಕೆಂದು ಹೇಳಿದರು.
ಉಪನ್ಯಾಸಕಿ ರೇಣುಕಾ ನಾಗರಾಜ ಲಕ್ಕುಂಡಿ ಉಪನ್ಯಾಸ ನೀಡಿದರು. ಶಾಂತಾ ಪಾಟೀಲ ಪ್ರಾರ್ಥನೆಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ.ಎಲ್. ಬುರಬರೆ ವಹಿಸಿದ್ದರು. ಸಿ.ಸಿ. ನೂರಶೆಟ್ಟರ, ಬಸವರಾಜ ಹೊಸೂರ, ಕೆ.ಎ. ಬಳಿಗೇರ, ಬಸವರಾಜ ಭೋರಶೆಟ್ಟರ, ಸುರೇಶ ಹವಳದ, ಶಿವು ಪಟ್ಟಣಶೆಟ್ಟರ, ಮುತ್ತು ಮಜ್ಜಗಿ, ಬಸವರಾಜ ರಾಜಮನಿ, ಮುತ್ತು ಹೂಗಾರ ಮುಂತಾದವರು ಉಪಸ್ಥಿತರಿದ್ದರು.



