ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿನ ಕೋಡಿಕೊಪ್ಪದ ಹಠಯೋಗಿ ಶ್ರೀ ವೀರಪ್ಪಜ್ಜನವರ ರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಸಡಗರ-ಸಂಭ್ರಮಗಳಿಂದ ನಡೆಯಿತು.
ಹರಹರ ಮಹಾದೇವ, ಶ್ರೀ ವೀರಪ್ಪಜ್ಜ ಮಹಾರಾಜಕೀ ಜೈ, ಹುಚ್ಚೀರಪ್ಪಜ್ಜನಿಗೆ ಜಯವಾಗಲಿ ಎಂಬ ಜಯ ಘೋಷಗಳು ಭಕ್ತರ ಸಮೂಹದಿಂದ ಮುಗಿಲು ಮುಟ್ಟುತ್ತಲೇ ದೇವಸ್ಥಾನದ ಎದಿರು ನಿಂತಿದ್ದ ರಥವು ಸಾವಧಾನವಾಗಿ ಪಾದಗಟ್ಟೆಯ ಕಡೆಗೆ ಚಲಿಸಿತು. ಭಕ್ತರು ಹೂವು, ಬಾಳೆ ಹಣ್ಣು, ಉತ್ತತ್ತಿಗಳನ್ನು ತೇರಿಗೆ ಭಕ್ತಿಯಿಂದ ಸಮರ್ಪಿಸಿದರು.
ಯಾವುದು ಹೌದು ಅದು ಅಲ್ಲ-ಯಾವುದು ಅಲ್ಲ ಅದು ಹೌದು’ ಎಂಬ ವೇದದ ಸಾರವನ್ನು ಎರಡೇ ಎರಡು ಸಾಲುಗಳಲ್ಲಿ ಜಗತ್ತಿಗೆ ನೀಡಿದ ಮಹಾ ದಾರ್ಶನಿಕ ವೀರಪ್ಪಜ್ಜ. ಆತ ಹಠಯೋಗಿಯೂ ಹೌದು.
ಹಠಯೋಗದಿಂದಲೇ ಎಲ್ಲವನ್ನೂ ಸಾಧಿಸಿ ಮುಕ್ತಿಯನ್ನು ಕಂಡ ಪವಾಡ ಪುರುಷ. ಪ್ರತಿ ಅಮವಾಸ್ಯೆಗೂ ಇಲ್ಲಿ ಒಂದು ಸಣ್ಣ ಜಾತ್ರೆಯೇ ನೆರೆದಿರುತ್ತದೆ.
ಗದುಗಿನ ನೆರೆಯ ಜಿಲ್ಲೆಗಳಾದ ಧಾರವಾಡ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಿಂದಲೂ ಭಕ್ತಸಾಗರ ಹರಿದು ಬಂದಿತ್ತು. ಚಿಣ್ಣರು ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ನಲಿದರೆ, ಲಲನೆಯರು ಸುಂದರವಾದ ಸೀರೆಗಳನ್ನು ಉಟ್ಟು ಸಂಭ್ರಮಿಸಿದರು. ಹಿರಿಯರು ಈ ಹಿಂದಿನ ಜಾತ್ರೆಯ ವೈಭವವನ್ನು ನೆನೆಯುತ್ತ ನಡೆದರೆ, ಹೊಸದಾಗಿ ಬಂದವರು ಕುತೂಹಲದಿಂದ ಜಾತ್ರೆಯ ವೈಭವವನ್ನು ಕಣ್ಣು ತುಂಬಿಕೊಂಡರು.
ಪಾದಗಟ್ಟೆಯವರೆಗೆ ಸಾಗಿದ ಜಾತ್ರೆ ಮರಳಿ ಸ್ವಸ್ಥಾನಕ್ಕೆ ಬಂದು ಸೇರಿದಾಗ ಭಕ್ತರು ಸಂತೋಷದಿಂದ ಚಪ್ಪಾಳೆ ತಟ್ಟಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಮಠದಲ್ಲಿ ರವಿವಾರ ಸಾಮೂಹಿಕ ವಿವಾಹ ಜರುಗಿತು. ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ, ನೂತನ ದಂಪತಿಗಳನ್ನು ಆಶೀರ್ವದಿಸಿದರು.