ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದ ಶಹಪೂರಪೇಟೆ 202 ವರ್ಷಗಳ ಇತಿಹಾಸ ಹೊಂದಿದೆ. ಸಾಂಸ್ಕೃತಿಕ ನಗರಿ ಎಂದೇ ಲಿಂ. ಸಿದ್ದಲಿಂಗ ಶ್ರೀಗಳು ಬಣ್ಣಿಸಿದ್ದರು. ಇಲ್ಲಿ 200 ವರ್ಷದಿಂದ ಎಲ್ಲ ಹಬ್ಬ ಮಾಡಿಕೊಂಡು ಬರಲಾಗಿದೆ. 1853ರಲ್ಲಿ ಆರಂಭವಾದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಂದಿನಿಂದ ಇಂದಿನವರೆಗೂ ಅದ್ದೂರಿ ಜಾತ್ರೆ ಆಯೋಜಿಸಿಕೊಂಡು ಬರಲಾಗಿದ್ದು, ಈ ವರ್ಷ ಆಗಸ್ಟ್ 7ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದೆ ಎಂದು ನಗರಸಭೆ ಸದಸ್ಯ ಚಂದ್ರಶೇಖರ ತಡಸದ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಳಸಾಪೂರ ಗುಡ್ಡದಲ್ಲಿ ಶ್ರೀ ವೀರಭದ್ರದೇವರು ಮಲಗಿದ್ದು, ಅದನ್ನು ಪ್ರತಿಷ್ಠಾಪಿಸುವಂತೆ ವೀರಭದ್ರಪ್ಪ ಬೇವಿನಮರದ ಕನಸಿನಲ್ಲಿ ಬಂದು ಹೇಳಿದರೆಂಬ ಐತಿಹ್ಯವಿದೆ. ಹಿರಿಯರ ಸಮ್ಮುಖದಲ್ಲಿ ಹುಡುಕಿದಾಗ ಅದೇ ಪ್ರದೇಶದಲ್ಲಿ 1853ರಲ್ಲಿ ಶ್ರೀ ವೀರಭದ್ರ ದೇವರು ದೊರೆಯುತ್ತದೆ. ಆ ಶ್ರೀ ವೀರಭದ್ರೇಶ್ವರ ದೇವರೇ ಇಂದು ಶಹಪೂರಪೇಟೆಯಲ್ಲಿ ನೆಲೆಸಿದೆ. ಕಳೆದ ವರ್ಷ ನೂತನ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಶ್ರೀ ಭದ್ರಕಾಳಿ, ಶ್ರೀ ವೀರಭದ್ರ ಮೂರ್ತಿಯ ಅದ್ದೂರಿ ರಥ ಸಾಗುತ್ತದೆ ಎಂದು ಹೇಳಿದರು.
ಸುರೇಖಾ ಪಿಳ್ಳೆ ಮಾತನಾಡಿ, ಆಗಸ್ಟ್ 7ರ ಮಧ್ಯಾಹ್ನ 12ಕ್ಕೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವರ ಕಲ್ಯಾಣ ಮಹೋತ್ಸವ, ಸಂಜೆ 5.30ಕ್ಕೆ ಕಳಸಾರೋಹಣ ನಡೆಯಲಿದೆ. ಆ.9ರ ಮುಂಜಾನೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ಆ.11ರ ಸಂಜೆ 6.30ಕ್ಕೆ ಮಹಾ ರಥೋತ್ಸವ, ಆ.12ರ ಮುಂಜಾನೆ 10ಕ್ಕೆ ಅಗ್ನಿ ಪ್ರವೇಶ, ಸಂಜೆ 6.30ಕ್ಕೆ ಲಘು ರಥೋತ್ಸವ, ಆ.19ರ ಸಂಜೆ 7ಕ್ಕೆ ದೀಪಾಲಂಕಾರ ಹಾಗೂ ಮಹಾ ಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.
ಅರಿವು ಫೌಂಡೇಶನ್ ಗದಗ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಶ್ರೀ ವೀರಭದ್ರ ದೇವಸ್ಥಾನ ಟ್ರಸ್ಟ್ ಇವರ ಸಹಕಾರದೊಂದಿಗೆ ಶ್ರೀ ಭದ್ರಕಾಳಮ್ಮ ದೇವಿ ಹಾಗೂ ಶ್ರೀ ವೀರಭದ್ರೇಶ್ವರರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ದಿ. ಸದಾನಂದ ಚನ್ನಪ್ಪ ಪಿಳ್ಳೆ ಸ್ಮರಣಾರ್ಥ ಆಗಸ್ಟ್ 9ರಂದು ಉಚಿತ ಆರೋಗ್ಯ ಶಿಬಿರವನ್ನು ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವನ್ನು ವಿ.ಪ ಸದಸ್ಯ ಎಸ್.ವ್ಹಿ ಸಂಕನೂರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜು ಖಾನಪ್ಪನವರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಡಿ.ಆರ್. ಪಾಟೀಲ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶಿವಪುತ್ರಪ್ಪ ಬೇವಿನಮರದ, ಶಿವಬಸಪ್ಪ ಯಂಡಿಗೇರಿ, ಅರಿವು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಶೀರಿ, 73ನೇ ಜಾತ್ರಾ ಮಹೋತ್ಸವದ ಅಧ್ಯಕ್ಷ ರಾಚಣ್ಣ ದೋಟ್ಯಾಳ, ಉಪಾಧ್ಯಕ್ಷ ವಿಶ್ವನಾಥ ಕೆರಕಣ್ಣವರ, ಕಾರ್ಯದರ್ಶಿ ರಾಚೋಟೇಶ್ವರ ಕಾಡಪ್ಪನವರ, ದಾನೇಶ ತಡಸದ, ಶಂಕರ ಕಾರದಕಟ್ಟಿ, ವಿಶ್ವನಾಥ ಶಿರಗಣ್ಣವರ, ಆದರ್ಶ ಅಸೂಟಿ, ವಿಶ್ವನಾಥ ಇಟಗಿ, ಗಗನ ಗೋಕಾವಿ, ಅಭಿಷೇಕ ಸಂಬರಗಿ ಉಪಸ್ಥಿತರಿದ್ದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಮುಂದಿನ ವರ್ಷದಿಂದ ದೇವಸ್ಥಾನದ ಮುಂಭಾಗದ ಶಿಲಾಮಂಟಪವನ್ನು ಪುನರ್ ನಿರ್ಮಾಣ ಮಾಡಲು ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಶಹಾಪೂರಪೇಟೆ ಹಿರಿಯರು ತೀರ್ಮಾನಿಸಿದ್ದಾರೆ. ಅವಳಿ ನಗರದ ಭಕ್ತಾದಿಗಳು ತನು-ಮನ-ಧನದಿಂದ ಸಹಾಯ, ಸಹಕಾರ ನೀಡಿ ಶ್ರೀ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು.
– ಚಂದ್ರಶೇಖರ ತಡಸದ.
ನಗರಸಭೆ ಸದಸ್ಯರು.