ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಕೃಷ್ಣ ಗೊಲ್ಲ ಸಮಾಜದ ಆಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಕೃಷ್ಣ ದೇಗುಲದ ಎದುರು ಮೊಸರಿನ ಗಡಗಿಯನ್ನು ಒಡೆಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೇಗುಲದಲ್ಲಿ ಪ್ರತಿಷ್ಠಾಪಿಸಲಾದ ಕೃಷ್ಣನ ಮೂರ್ತಿಗೆ ಬೆಳಿಗ್ಗೆ ವಿಧಿ ವಿಧಾನಗಳೊಂದಿಗೆ ನಾಗರಾಜ ಭಟ್ಟರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು.
ನಂತರ ಶ್ರೀ ಕೃಷ್ಣನ ಮೂರ್ತಿ ಹಾಗೂ ಭಾವಚಿತ್ರ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಯಲ್ಲಿ ಜಾಂಜ್ ಮೇಳಗಳೊಂದಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಶ್ರೀಕೃಷ್ಣ ವೇಷ-ಭೂಷಣ ಧರಿಸಿದ ಮಕ್ಕಳು ಗಮನ ಸೆಳೆದರು. ಮುತ್ತೈದೆಯರು ಮೊಸರು ಗಡಗಿಯ ಕುಂಭವನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಎತ್ತರದಲ್ಲಿ ಕಟ್ಟಲಾದ ಮೊಸರಿನ ಗಡಗಿಯನ್ನು ಕೃಷ್ಣ ತನ್ನ ಕೊಳಲಿನಿಂದ ಒಡೆದ ನಂತರ ಅದರ ಪ್ರಸಾದವನ್ನು ಭಕ್ತರಿಗೆ ಹಂಚಲಾಯಿತು. ನಂತರ ಮಹಾ ಅನ್ನಪ್ರಸಾದ ನಡೆಯಿತು. ಇದಕ್ಕೂ ಪೂರ್ವ ಹಿಂದಿನ ರಾತ್ರಿ ಕೃಷ್ಣನ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ಜರುಗಿತು. ನಂತರ ಕುಂಬಾರ ಮನೆಗೆ ತೆರಳಿ ಐರಾಣಿಯನ್ನು ತರಲಾಯಿತು.