ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪುಟ್ಟ ಮಕ್ಕಳ ರಾಧಾ-ಕೃಷ್ಣರ ವೇಷ ಭೂಷಣ, ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ, ಒಂದೇ ಬಣ್ಣದ ಸೀರೆಯುಟ್ಟು ಕುಂಭ ಹೊತ್ತ ಸುಮಂಗಲೆಯರು, ಶ್ರೀಕೃಷ್ಣ ಮೂರ್ತಿಯ ಭವ್ಯ ಮೆರವಣಿಗೆಗಳು ಜನಮನ ಸೆಳೆದವು.
ಭಾನುವಾರ ಇಲ್ಲಿಯ ಶ್ರೀಕೃಷ್ಣ ಯುವಕ ಮಂಡಳ ಹಾಗೂ ಯಾದವ ಸಮಾಜವು ಹಮ್ಮಿಕೊಂಡ 37ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ದೇವಸ್ಥಾನದ ಆವರಣದಲ್ಲಿ 24 ಬಾಲ ಜೋಡಿ ರಾಧಾ-ಕೃಷ್ಣರ ವೇಷ ಭೂಷಣಗಳ ಸ್ಪರ್ಧೆಯು ಗಮನ ಸೆಳೆಯಿತು. ಸುಮಂಗಲಿಯರ ಪೂರ್ಣ ಕುಂಭದೊಂದಿಗೆ ಶ್ರೀಕೃಷ್ಣನ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯ ನಂತರ ಕೃಷ್ಣ ದೇವಸ್ಥಾನದ ಆವರಣದಲ್ಲಿ ಎತ್ತರಕ್ಕೆ ಕಟ್ಟಿದ 5 ಮೊಸರು ಗಡಿಗೆಗಳನ್ನು ಶ್ರೀ ಕೃಷ್ಣ ವೇಷಧಾರಿ ತನ್ನ ಕೊಳಲಿನಿಂದ ಒಡೆದಾಗ, ಗಡಗಿಯಲ್ಲಿದ್ದ ಮೊಸರನ್ನು ಸೇರಿದ್ದ ನೂರಾರು ಭಕ್ತರು ಪ್ರಸಾದವಾಗಿ ಸ್ವೀಕರಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದಕ್ಕೂ ಪೂರ್ವ ದೇವಸ್ಥಾನದಲ್ಲಿಯ ಶ್ರೀಕೃಷ್ಣ ಮೂರ್ತಿಯನ್ನು ಅಲಂಕರಿಸಿ ವಿಧಿ-ವಿಧಾನಗಳೊಂದಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು.
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ 7ರಿಂದ 8ರವರೆಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 50 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಣ್ಣಗಳೊಂದಿಗೆ ಶ್ರಿಕೃಷ್ಣನ ವಿವಿಧ ಭಂಗಿಯ ರಂಗೋಲಿ ಹಾಗೂ ವಿವಿಧ ಚಿತ್ತಾರಗಳ ರಂಗೋಲಿಯನ್ನು ಬಿಡಿಸಿದರು. ಚಿತ್ರಕಲಾ ಶಿಕ್ಷಕರಾದ ಶಾರದಾ ಮುಂಡೆವಾಡೆ, ರಮೇಶ ಹಾದಿಮನಿ, ಜೈಶೀಲಾ ಜ್ಯೋತಿ ಹಾಗೂ ಕೃಷ್ಣ ವೇಷ-ಭೂಷಣದ ಸ್ಪರ್ಧೆಗೆ ಶಿಕ್ಷಕರಾದ ಮಲ್ಲಮ್ಮ ಹೂಗಾರ, ರೇಷ್ಮಾ ನದಾಫ್ ನಿರ್ಣಾಯಕರಾಗಿ ಆಗಮಿಸಿದ್ದರು.
ರಾಧಾ-ಕೃಷ್ಣ ಜನ್ಮಾಷ್ಟಮಿ ವೇಷ ಭೂಷಣ ಸ್ಪರ್ದೆಯ 24 ಜೋಡಿಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳೂ ಭಾಗವಹಿಸಿದ್ದು ವಿಶೇಷವಾಗಿತ್ತು. ನಾಜಿಮಾಬಾನು ಲಕ್ಕಲಕಟ್ಟಿ, ಆಯೆರಾ ಹಿರೇಮನಿ ರಾಧೆಯಾಗಿ ಹಾಗೂ ಅಸೀಮ್ ಹಿರೇಮನಿ ಕೃಷ್ಣನ ವೇಷವನ್ನು ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.
“ಕಳೆದ 37 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಶ್ರೀ ಕೃಷ್ಣನ ಮಹಿಮೆ ಅಪಾರವಾಗಿದ್ದು, ಗ್ರಾಮದ ಸರ್ವ ಧರ್ಮದವರು ಪಾಲ್ಗೊಂಡು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಿದ್ದಾರೆ”
– ರಾಜು ಬೆಂತೂರು, ಕುಮಾರ ಹಟ್ಟಿ.
ಶ್ರೀಕೃಷ್ಣ ಯುವಕ ಮಂಡಳದ ಸದಸ್ಯರು.