ವಿಜಯಸಾಕ್ಷಿ ಸುದ್ದಿ, ಮುಂಡರಗಿ: ನಾಡಿನಲ್ಲಿ ಶ್ರೇಷ್ಠ, ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿರುವ ಪರಮಪೂಜ್ಯ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಇಳಿವಯಸ್ಸಿನಲ್ಲೂ ಶ್ರೀಮಠ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಜ.ಅ. ವಿದ್ಯಾ ಸಂಸ್ಥೆಯ ಮೂಲಕ 30ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿ ಲಕ್ಷಾಂತರ ಮಕ್ಕಳಿಗೆ ಅಕ್ಷರ, ಅರಿವು, ಸಂಸ್ಕಾರ ನೀಡಿದ್ದಾರೆ. ಶ್ರೀಮಠ ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಶ್ರೀಗಳು ಮಾನವೀಯ ಮೌಲ್ಯಗಳು, ಸ್ಪಂದನೆಯ ಭಾವನೆಯನ್ನು ಹೊಂದಿದ್ದಾರೆ. ಅವರಿಂದ ಸಮಾಜಕ್ಕೆ ಪಾರ ಅನುಕೂಲವಾಗಿದೆ. ಇಡೀ ಸಮಾಜಕ್ಕೆ ಜ.ಅ. ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಜರುಗಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀಗಳು ಶಾಲೆ ಪ್ರಾರಂಭಿಸಿದಾಗ ಮಕ್ಕಳನ್ನು ಶಾಲೆಗೆ ಕಳಿಸಲೂ ಹಿಂದೆ ಮುಂದೆ ನೋಡುವ ಕಾಲವಿತ್ತು. ಆಗಲೂ ಶ್ರೀಗಳು ಜನತೆಗೆ ಅಕ್ಷರದ ಮಹತ್ವವನ್ನು ತಿಳಿಸಿ ಶಾಲೆಗೆ ಕರೆತರುವ ಮೂಲಕ ಯಶಸ್ವಿಯಾಗಿದ್ದಾರೆ. ಶ್ರೀಗಳು ಊರಿಂದೂರಿಗೆ ಜೋಳಿಗೆ ಹಾಕಿಕೊಂಡು ಹೋಗಿ ಭಕ್ತರಿಂದ ಸಂಗ್ರಹಿಸಿದ ಕಾಣಿಕೆಯಲ್ಲಿ ಶಾಲೆ ನಡೆಸಬೇಕಿತ್ತು. ಇಂದಿಗೂ ಊರೂರಿಗೆ ತೆರಳಿ, ಬರುವ ಹಣದಲ್ಲಿ ವಿದ್ಯಾ ಸಂಸ್ಥೆ, ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳವರು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು. ಶ್ರೀಮಠದ ಉತ್ತರಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಸುಜಾತಾ ದೊಡ್ಡಮನಿ, ಡಿ.ಡಿ. ಮೋರನಾಳ, ಡಾ. ಬಿ.ಜಿ. ಜವಳಿ, ಆನಂದಗೌಡ ಪಾಟೀಲ, ಡಾ. ಪ್ರಕಾಶ ಹೊಸಮನಿ, ವೆಂಕಟಪ್ಪ ನಾಯಕ, ಮಹೇಶಗೌಡ ಪಾಟೀಲ, ಹಿರಿಯ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ ಮಾತನಾಡಿ, ದೇಶದ ಶಕ್ತಿ ಉಳಿದಿದ್ದು ಗ್ರಾಮೀಣ ಭಾಗದಲ್ಲಿ ಮಾತ್ರ. ಮಠ-ಮಾನ್ಯಗಳು ಚಾರಿತ್ರ‍್ಯ ಕಲಿಸುತ್ತವೆ. ಪತ್ರಿಕೋದ್ಯಮ ಎಂದರೆ ತಪಸ್ಸು ಇದ್ದಂತೆ. ಚಾರಿತ್ರ‍್ಯಿಕ ನಿರ್ಮಾಣ ಮಾಡುವ ಕೆಲಸ ಮಾಡಬೇಕು. ಮಠಕ್ಕೆ ಋಣಿಯಾಗಬೇಕು. ಈ ದೇಶಕ್ಕೆ ಮಠಮಾನ್ಯಗಳು ಏನು ಕೊಡುಗೆ ನೀಡಿವೆ ಎಂದು ಪ್ರಶ್ನಿಸುವವರನ್ನು ಇಂತಹ ಮಠಗಳಿಗೆ ಕರೆತಂದು ತೋರಿಸಬೇಕು. 1924ರಲ್ಲಿ ಒಂದೇ ಇದ್ದ ಶಾಲೆಯು ಇದೀಗ 33 ಅಂಗ ಸಂಸ್ಥೆಗಳನ್ನು ಹೊಂದುವಂತೆ ಶ್ರೀಗಳು ಮಾಡಿದ್ದು ದೊಡ್ಡ ಸಾಧನೆ ಎಂದರು.



