ಬೆಂಗಳೂರು/ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ತಕರಾರು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಆಯ್ಕೆ ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, 279 ಅಂಚೆ ಮತಪತ್ರಗಳನ್ನು ಎರಡು ವಾರಗಳೊಳಗೆ ಮರುಪರಿಶೀಲನೆ ಮಾಡಲು ಸೂಚಿಸಿದೆ.
ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠ, ಮರುಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ನೀಡಿದೆ. ಇದೇ ವೇಳೆ, ಆದೇಶಕ್ಕೆ ತಡೆ ನೀಡುವಂತೆ ರಾಜೇಗೌಡ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ, ತನ್ನದೇ ಆದೇಶಕ್ಕೆ ಎರಡು ವಾರಗಳ ಮಧ್ಯಂತರ ತಡೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ
2023ರ ವಿಧಾನಸಭಾ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು ಅಲ್ಪ ಮತಾಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಲೋಪ ನಡೆದಿದೆ ಎಂದು ಆರೋಪಿಸಿ ಡಿ.ಎನ್. ಜೀವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ, ಚುನಾವಣೆಯಲ್ಲಿ ಅನಧಿಕೃತ ವೆಚ್ಚ ಸೇರಿದಂತೆ ಹಲವು ಆರೋಪಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಪ್ರಕರಣದಲ್ಲಿ ಹಿಂದೆ ಹಲವು ಹಂತಗಳಲ್ಲಿ ವಿಚಾರಣೆ ನಡೆದಿದ್ದು, ಸುಪ್ರೀಂ ಕೋರ್ಟ್ ಕೂಡ ಹಸ್ತಕ್ಷೇಪ ಮಾಡಿತ್ತು. ಅಂತಿಮವಾಗಿ, ಪ್ರಕರಣವನ್ನು ಹೈಕೋರ್ಟ್ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಇದೀಗ ಹೈಕೋರ್ಟ್ ನೀಡಿರುವ ಮರುಪರಿಶೀಲನೆ ಆದೇಶದಿಂದ ಶೃಂಗೇರಿ ಕ್ಷೇತ್ರದ ಅಂತಿಮ ಫಲಿತಾಂಶದ ಮೇಲೆ ಕುತೂಹಲ ಹೆಚ್ಚಾಗಿದೆ.



