ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ 61 ಪರೀಕ್ಷಾ ಕೇಂದ್ರಗಳಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಶುಕ್ರವಾರ ಪ್ರಥಮ ಭಾಷೆ ವಿಷಯ ಪರೀಕ್ಷೆಯಲ್ಲಿ 15,037 ವಿದ್ಯಾರ್ಥಿಗಳು ಹಾಜರಾಗಿದ್ದು, 296 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪ್ರಥಮ ಭಾಷೆ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಶಹರ ವ್ಯಾಪ್ತಿಯಲ್ಲಿ 2,601, ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ 2,553, ಮುಂಡರಗಿ 2,022, ನರಗುಂದ 1,527, ರೋಣ 3,879 ಹಾಗೂ ಶಿರಹಟ್ಟಿ 2,751 ಸೇರಿ ಒಟ್ಟು 15,333 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊAಡಿದ್ದರು.
ಆ ಪೈಕಿ ಗದಗ ಶಹರ ವ್ಯಾಪ್ತಿಯಲ್ಲಿ 2,548, ಗದಗ ಗ್ರಾಮೀಣ ವ್ಯಾಪ್ತಿಯಲ್ಲಿ 2,515, ಮುಂಡರಗಿ 1,970, ನರಗುಂದ 1,515, ರೋಣ 3,784 ಹಾಗೂ ಶಿರಹಟ್ಟಿ 2,705 ಸೇರಿ ಒಟ್ಟು 15,037 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇನ್ನುಳಿದಂತೆ 296 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆ ಮತ್ತು ಡಿಬಾರ್ ಆದ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಡಿಡಿಪಿಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಅಜ್ಜಿಯ ಸಾವಿನ ಶೋಕದ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಜಗದ್ಗುರು ತೋಂಟದಾರ್ಯ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿ ಅಜ್ಜಿಯ ಸಾವಿನ ದುಃಖದ ನಡುವೆಯೂ ಎಸ್‌ಎಸ್‌ಎಲ್‌ಸಿ ಕನ್ನಡ ಪರೀಕ್ಷೆ ಬರೆದ ವಿದ್ಯಾರ್ಥಿನಿಯಾಗಿದ್ದಾಳೆ.
ಶುಕ್ರವಾರ ಎಸ್‌ಎಸ್‌ಎಲ್‌ಸಿ ಕನ್ನಡ ವಿಷಯದ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿ ಸಿದ್ದಳಾಗಿದ್ದಳು. ಆದರೆ, ವಿಧಿಯಾಟ ಬೇರೆಯೇ ಇತ್ತು. ವಿದ್ಯಾರ್ಥಿನಿಯ ಅಜ್ಜಿ ಗುರುವಾರ ರಾತ್ರಿಯೇ ನಿಧನರಾದರು. ಶುಕ್ರವಾರ ಬೆಳಿಗ್ಗೆ ಪರೀಕ್ಷೆ ಎದುರಿಸಲು ಸಂಪೂರ್ಣ ಸಿದ್ಧಳಾಗಿದ್ದ ವಿದ್ಯಾರ್ಥಿನಿ ದುಃಖದ ವಾತಾವರಣದಲ್ಲಿ ಪರೀಕ್ಷೆಗೆ ತೆರಳಲು ಹಿಂದೇಟು ಹಾಕಿದಾಗ, ಪಾಲಕರು, ಶಾಲೆಯ ಶಿಕ್ಷಕರು ಮತ್ತು ಅವಳ ಸಹಪಾಠಿಗಳು ಧೈರ್ಯ ತುಂಬಿದರು.
ಶುಕ್ರವಾರ ಬೆಳಿಗ್ಗೆ ಮೃತ ಅಜ್ಜಿಗೆ ಪೂಜೆ ಸಲ್ಲಿಸಿ, ಪುಷ್ಪ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡು ಶಾಲೆಗೆ ಆಗಮಿಸಿ ಪರೀಕ್ಷೆಯನ್ನು ಎದುರಿಸಿದ್ದಾಳೆ. ಶಿಕ್ಷಕಿಯರಾದ ಎ.ಬಿ. ಬೇವಿನಕಟ್ಟಿ, ಸಂಜೋತ ಸಂಕಣ್ಣವರ್, ಎಸ್.ಎಂ. ಹಂಚಿನಾಳ, ಬೂದಪ್ಪ ಅಂಗಡಿ, ಎಸ್.ಎಸ್. ತಿಮ್ಮಾಪುರ್, ಎಂ.ಎಂ. ಗೌಳೇರ ಸೇರಿದಂತೆ ಎಲ್ಲ ಶಿಕ್ಷಕರು ಪರೀಕ್ಷಾ ಕೊಠಡಿಗೆ ತೆರಳಿ ವಿದ್ಯಾರ್ಥಿನಿ ಜಲಜಾಕ್ಷಿ ಕಿಲಾರಿಗೆ ಧೈರ್ಯ ತುಂಬಿದರು.