ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರದಿಂದ ಪ್ರಾರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಅತ್ಯಂತ ಸುಗಮ, ಪಾರದರ್ಶಕ ಮತ್ತು ಯಶಸ್ವಿಯಾಗಿ ನಡೆದವು.
ಶುಕ್ರವಾರ ಬೆಳಿಗ್ಗೆ ಪಟ್ಟಣದ ಪರೀಕ್ಷಾ ಕೇಂದ್ರಗಳಿಗೆ ತಹಸೀಲ್ದಾರ ವಾಸುದೇವ ಸ್ವಾಮಿ ಮತ್ತು ತಾ.ಪಂ ಇ.ಓ. ಕೃಷ್ಣಪ್ಪ ಧರ್ಮರ ಮತ್ತು ಅಧಿಕಾರಿಗಳು ಆಗಮಿಸಿ ಪರೀಕ್ಷಾರ್ಥಿಗಳಿಗೆ ಹೂಗಳನ್ನು ನೀಡುವ ಮೂಲಕ ಶುಭಕೋರಿ, ವಿದ್ಯಾರ್ಥಿಗಳ ಬದುಕಿನಲ್ಲಿ ಎಸ್ಸೆಸ್ಸೆಲ್ಸಿ ಮಹತ್ವದ ಘಟ್ಟವಾಗಿದ್ದು, ಇಲ್ಲಿಂದಲೇ ವಿದ್ಯಾರ್ಥಿಯ ಭವಿಷ್ಯದ ಹಾದಿ ಸ್ಪಷ್ಟಗೊಳ್ಳುತ್ತದೆ. ಯಾವುದೇ ಗೊಂದಲಕ್ಕೆ ಮನಸ್ಸಿನಲ್ಲಿ ಜಾಗ ಕೊಡದೆ ಆತ್ಮವಿಶ್ವಾಸ, ಧೈರ್ಯ, ಸ್ಪಷ್ಟತೆ, ಸಂಯಮದಿಂದ ಪರೀಕ್ಷೆ ಬರೆಯಬೇಕು. ಇಡೀ ವರ್ಷದ ಓದು, ಪೂರ್ವ ಸಿದ್ಧತಾ ಪರೀಕ್ಷೆ, ಅಣಕು ಪರೀಕ್ಷೆಗಳಿಗೆ ಮಾಡಿಕೊಂಡ ತಯಾರಿಗಳನ್ನೆಲ್ಲ ಕಣ್ಮುಂದೆ ತಂದುಕೊಂಡು, ಓದಿರುವುದನ್ನೆಲ್ಲ ಪುನಃ ಮನನ ಮಾಡಿಕೊಂಡು ಪ್ರಶ್ನೆಗಳನ್ನು ಒಂದೊಂದಾಗಿ ಬಿಡಿಸಬೇಕು. ಪರೀಕ್ಷಾ ಸಮಯದಲ್ಲಿ ಪಾಲಕರು ಮಕ್ಕಳಿಗೆ ಮೃದು ದನಿಯಲ್ಲಿ ಪ್ರೀತಿಯಿಂದ ಸಲಹೆ- ಸೂಚನೆಗಳನ್ನು ನೀಡಬೇಕು. ಮೊಬೈಲ್, ಟಿವಿಗಳಿಂದ ದೂರವಿದ್ದು ಪರೀಕ್ಷೆಯತ್ತ ಚಿತ್ತ ಹರಿಸಬೇಕು. ಪರೀಕ್ಷೆಯನ್ನು ಹಿಂಸೆ ಎಂದು ಭಾವಿಸದೆ, ಖುಷಿಯಿಂದ ಪರಿಗಣಿಸಿದಾಗ ಮಾತ್ರವೇ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯ ಎಂದರು.
ಈ ವೇಳೆ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಬಿಆರ್‌ಸಿ ಈಶ್ವರ ಮೇಡ್ಲೇರಿ, ಉಮೇಶ ನೇಕಾರ, ಮುಖ್ಯೋಪಾಧ್ಯಾಯ ಜಿ.ಡಿ. ಲಮಾಣಿ, ಪಿ.ಕೆ. ಹೊನ್ನಿಕೊಪ್ಪ ಹಾಗೂ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಇದ್ದರು.
ಸೋಮವಾರ ಕನ್ನಡ ಪತ್ರಿಕೆ ಪರೀಕೆಗೆ ಲಕ್ಷ್ಮೇಶ್ವರದ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿನ ಒಟ್ಟು 1383 ವಿದ್ಯಾರ್ಥಿಗಳಲ್ಲಿ 1366 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬಿಸಿಎನ್ ಪ್ರೌಢಶಾಲೆ, ಪಾರ್ವತಿ ಮಕ್ಕಳ ಬಳಗದ ಪ್ರೌಢಶಾಲೆ, ಉಮಾ ವಿದ್ಯಾಲಯ ಪ್ರೌಢಶಾಲೆ, ಸಮೀಪದ ಪು.ಬಡ್ನಿ ಸರಕಾರಿ ಪ್ರೌಢಶಾಲೆ, ಶಿಗ್ಲಿಯ ಎಸ್‌ಎಸ್‌ಕೆ ಪ್ರೌಢಶಾಲೆ, ಬಾಲೆಹೊಸೂರಿನ ಸರಕಾರಿ ಪ್ರೌಢಶಾಲೆ ಸೇರಿ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 17 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಪರೀಕ್ಷಾ ಸಮಯದಲ್ಲಿ ಯಾವುದೇ ನಕಲು ಪ್ರಕರಣಗಳು ನಡೆಯದೆ ಶಾಂತಿಯುತವಾಗಿ ಪರೀಕ್ಷೆಗಳು ನಡೆದವು. ಜಾಗೃತ ದಳದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.