ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಸತತ 2ನೇ ಬಾರಿಯೂ 17ನೇ ಸ್ಥಾನದಲ್ಲಿ ಉಳಿದ ಗದಗ ಜಿಲ್ಲೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 2025ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಗದಗ ಜಿಲ್ಲೆ ರಾಜ್ಯಮಟ್ಟದಲ್ಲಿ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2024ರಲ್ಲಿಯೂ 17ನೇ ಸ್ಥಾನದಲ್ಲಿದ್ದ ಗದಗ ಜಿಲ್ಲೆ ಮುಂಬರುವ ವರ್ಷಗಳಲ್ಲಿ ಇನ್ನೂ ಉತ್ತಮ ಫಲಿತಾಂಶ ಸಾಧಿಸುವ ನಿರೀಕ್ಷೆಯನ್ನು ಉಳಿಸಿಕೊಂಡಿದೆ.

Advertisement

2023ರಲ್ಲಿ 25ನೇ ಸ್ಥಾನದಲ್ಲಿದ್ದ ಗದಗ ಜಿಲ್ಲೆ, 2024ರ ಸಾಲಿನಲ್ಲಿ ಆಶಾದಾಯಕವಾಗಿ 17ನೇ ಸ್ಥಾನಕ್ಕೆ ಏರಿಕೆ ಕಂಡಿತು. ಈ ಬಾರಿಯೂ 17ನೇ ಸ್ಥಾನವನ್ನು ಕಾಪಾಡಿಕೊಂಡಿದೆಯಲ್ಲದೆ, ಕಳೆದೆರಡು ವರ್ಷಗಳಿಂದ ಗದಗ ಜಿಲ್ಲೆಯ ಫಲಿತಾಂಶ ತೃಪ್ತಿಕರವಾಗಿರುವುದು ಶಿಕ್ಷಣ ಪ್ರೇಮಿಗಳಲ್ಲಿ ತುಸು ನೆಮ್ಮದಿ ಮೂಡಿಸಿದೆ.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ 14521 ವಿದ್ಯಾರ್ಥಿಗಳ ಪೈಕಿ 9834 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟಾರೆ ಶೇ. 67.72ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾವಾರು ಫಲಿತಾಂಶದಲ್ಲಿ ಈ ಬಾರಿ ಶೇ. 7.02ರಷ್ಟು ಕಡಿಮೆಯಾಗಿದ್ದರೂ ರಾಜ್ಯ ರ‍್ಯಾಂಕಿAಗ್‌ನಲ್ಲಿ ಈ ಸಲವೂ 17ನೇ ಸ್ಥಾನವನ್ನು ಕಾಯ್ದಿರಿಸಿದೆ.

ಗೊಜನೂರ ಮೊರಾರ್ಜಿ ದೇಸಾಯಿ ಶಾಲೆಯ ಉದಯ ಕಟ್ಟೆಣ್ಣವರ, ಸ್ಪೂರ್ತಿ ಮನ್ನಮ್ಮನವರ, ಲಕ್ಷ್ಮೇಶ್ವರದ ಲಿಟಲ್ ಹಾರ್ಟ್ ಇಂಟರ್‌ನ್ಯಾಶನಲ್ ಶಾಲೆಯ ಸುಮೀತಗೌಡ ನರಸಮ್ಮನವರ, ಶಿಗ್ಲಿಯ ಸೋಹಾ ನದಾಫ್, ಮುಂಡರಗಿಯ ಆದರ್ಶ ವಿದ್ಯಾಲಯದ ಕಾವ್ಯ ಉಪ್ಪಾರ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳು 625ಕ್ಕೆ 622 ಅಂಕ ಪಡೆದು, ಶೇ. 99.52ರಷ್ಟು ಫಲಿತಾಂಶ ಪಡೆದಿದ್ದಾರೆ.

ಲಕ್ಷ್ಮೇಶ್ವರದ ಎಸ್‌ಟಿಪಿಎಂಬಿ ಶಾಲೆಯ ಜಯಂತ ನವಲಗುಂದ, ಗದಗ ಸೇಂಟ್ ಜಾನ್ ಶಾಲೆಯ ಜಸ್ಸಿಕಾ ಅಪೇಕ್ಷಿತಾ ಜಿಲ್ಲೆಗೆ ತೃತೀಯ ಸ್ಥಾನ (ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ) ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು 625ಕ್ಕೆ 621 ಅಂಕ ಪಡೆದು, ಶೇ. 99.36ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಗದಗ ತೋಂಟದಾರ್ಯ ಶಾಲೆಯ ಸಮರ್ಥ ಮಸ್ತಮರಡಿ 98.88 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ದ್ವಿತೀಯ ಹಾಗೂ ಲಕ್ಕುಂಡಿಯ ಬಿ.ಎಚ್. ಪಾಟೀಲ ಸಂಯುಕ್ತ ಪಪೂ ಕಾಲೇಜಿನ ಪ್ರಕಾಶ ಪಾಪನಾಶಿ ಶೇ. 98.24 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಉರ್ದು ಮಾಧ್ಯಮದಲ್ಲಿ ಲಕ್ಷ್ಮೇಶ್ವರದ ಸರಕಾರಿ ಉರ್ದು ಶಾಲೆಯ ಶಫೀಯಾಬೇಗಂ ಮಲ್ಲಿಕ್ ಶೇ. 96.96 ಅಂಕ ಪಡೆದು ಜಿಲ್ಲೆಗೆ ಪ್ರಥಮ, ಗದಗ ಆಂಗ್ಲೋ ಉರ್ದು ಶಾಲೆಯ ಶಿಫಾ ಖಲೀಫಾ ಹಾಗೂ ಗಜೇಂದ್ರಗಡ ಸರಕಾರಿ ಉರ್ದು ಶಾಲೆಯ ಜೀನತ್ ಕೊಪ್ಪಳ ಶೇ. 92ರಷ್ಟು ಅಂಕ ಪಡೆದು ಜಿಲ್ಲೆಗೆ ದ್ವಿತೀಯ, ಲಕ್ಷ್ಮೇಶ್ವರದ ಸರಕಾರಿ ಉರ್ದು ಶಾಲೆಯ ತೌಸಿನ್ ಬಾನು ಬಾಗೋಡಿ ಶೇ. 91.52 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ತಾಲೂಕುವಾರು ಫಲಿತಾಂಶ

ತಾಲೂಕು ಪರೀಕ್ಷೆಗೆ ಕುಳಿತವರು ಉತ್ತೀರ್ಣರಾದವರು

ಗದಗ ಶಹರ 2476 1451

ಗದಗ ಗ್ರಾಮೀಣ 2415 1591

ಮುಂಡರಗಿ 1924 1239

ನರಗುಂದ 1472 941

ರೋಣ 3996 2506

ಶಿರಹಟ್ಟಿ 2638 2106

ಒಟ್ಟು 14521 9834

“ರಾಜ್ಯಮಟ್ಟದ ಸರಾಸರಿ ಅಂಕಗಳನ್ನು ಗಮನಿಸಿದಾಗ ನಮ್ಮ ಪ್ರಯತ್ನ ಫಲಿಸಿರುವುದು ಸ್ಪಷ್ಟವಾಗುತ್ತದೆ. ಶೈಕ್ಷಣಿಕ ವರ್ಷದ ಆರಂಭದಿಂದ ಸಚಿವ ಎಚ್.ಕೆ. ಪಾಟೀಲ, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ ಅವರ ವಿಶೇಷ ಮುತುವರ್ಜಿಯಿಂದ ಈ ಸಮಾಧಾನಕರ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಶ್ರಮವಹಿಸಿ ಫಲಿತಾಂಶವನ್ನು ಮೇಲಕ್ಕೆ ಎತ್ತುವ ಪ್ರಯತ್ನಗಳನ್ನು ಮಾಡಲಿದ್ದೇವೆ”

-ಆರ್.ಎಸ್. ಬುರಡಿ.

ಡಿಡಿಪಿಐ, ಗದಗ.

ಲಕ್ಷ್ಮೇಶ್ವರದ ಎಸ್‌ಟಿಪಿಎಂಬಿ ಆಂಗ್ಲ ಮಾಧ್ಯಮ ಶಾಲೆಯ ಸಂಪದಾ ಕುಲಕರ್ಣಿ, ಖಾದಿಜಾ ಸೂರಣಗಿ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಿಹಾನ್ ಶಿರಬಡಗಿ, ಗದಗ ನಗರದ ಮಹಾವೀರ ಜೈನ್ ಶಾಲೆಯ ಮಮ್ತಾಜ್ ಅತ್ತಾರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ನಾಲ್ವರು ವಿದ್ಯಾರ್ಥಿಗಳು 625ಕ್ಕೆ 623 ಅಂಕಗಳನ್ನು ಪಡೆದು ಶೇ. 99.68ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಜಿಲ್ಲೆಯಲ್ಲಿ 5 ಸರಕಾರಿ, 1 ಅನುದಾನಿತ, 5 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 11 ಶಾಲೆಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಿವೆ. 4 ಸರಕಾರಿ, 25 ಅನುದಾನಿತ ಮತ್ತು 10 ಅನುದಾನ ರಹಿತ ಸೇರಿದಂತೆ 39 ಶಾಲೆಗಳು ಶೇ. 40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ್ದು, ಈ ಬಾರಿ 1 ಅನುದಾನಿತ ಹಾಗೂ 2 ಅನುದಾನ ರಹಿತ ಶಾಲೆಗಳು ಶೂನ್ಯ ಸಾಧನೆ ಮಾಡಿವೆ.


Spread the love

LEAVE A REPLY

Please enter your comment!
Please enter your name here