ವಿಜಯಸಾಕ್ಷಿ ಸುದ್ದಿ, ಗದಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಗದಗ ಸಿಟಿ ಫುಟ್ಬಾಲ್ ಕ್ಲಬ್ ವತಿಯಿಂದ ಎಪ್ರಿಲ್ 7ರಂದು ಬೆಳಿಗ್ಗೆ 11.30ಕ್ಕೆ ಬೇಸಿಗೆ ಫುಟ್ಬಾಲ್ ತರಬೇತಿ ಶಿಬಿರ ನಡೆಯಲಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಚ್. ಪಾಟೀಲ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ ಎಂದು ಮುಖ್ಯ ತರಬೇತುದಾರ ಶ್ಯಾಮ್ಸನ್ ಡಾನ್ ಹೇಳಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗದಗ ಜಿಲ್ಲಾ ಫುಟ್ಬಾಲ್ ಜಿ.ಝಡ್.ಎಫ್.ಸಿ ಬದಲಾಗಿ, ಹೊಸದಾಗಿ ಗದಗ ಸಿಟಿ ಫುಟ್ಬಾಲ್ ಕ್ಲಬ್ ಜಿ.ಸಿ.ಎಫ್.ಸಿ ಎಂದು ಮರು ನಾಮಕರಣ ಮಾಡಿರುವುದರಿಂದ ಕ್ಲಬ್ ಉದ್ಘಾಟನೆ ಮಾಡಲಾಗುತ್ತಿದೆ. ಜೊತೆಗೆ, ಗದಗ ಸಿಟಿ ಫುಟ್ಬಾಲ್ ಕ್ಲಬ್‌ನ ನೂತನ ಲೋಗೋ ಬಿಡುಗಡೆ ನಡೆಯಲಿದ್ದು, ಹೊಸದಾಗಿ ಗದಗ ಸಿಟಿ ಫುಟ್ಬಾಲ್ ಕ್ಲಬ್ ಜರ್ಸಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದರು.
ಫುಟ್ಬಾಲ್ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಬಾಲಕ-ಬಾಲಕಿಯರಿಗೆ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‌ನಿಂದ ಮಾನ್ಯತೆ ಪಡೆದ ಅನುಭವಿ ಫುಟ್ಬಾಲ್ ತರಬೇತುದಾರರಿಂದ ತರಬೇತಿ ನೀಡಿ, ಮುಂಬರುವ ದಿನಗಳಲ್ಲಿ ಗದಗ ಜಿಲ್ಲೆಯಿಂದ ಬಾಲಕ-ಬಾಲಕಿಯರನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಜರಗುವ ಫುಟ್ಬಾಲ್ ಕ್ರೀಡೆಯಲ್ಲಿ ಪ್ರತಿನಿಧಿಸುವುದು ಮುಖ್ಯ ಉದ್ದೇಶವಾಗಿದೆ. ತರಬೇತಿ ಶಿಬಿರ ಪೂರ್ಣಗೊಂಡ ನಂತರ ಫುಟ್ಬಾಲ್ ಕ್ಲಬ್ ವತಿಯಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ತರಬೇತಿ ನೀಡಲಾಗುವುದು ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯಾಸೀನ್ ಈಟಿ, ರಾಘವೇಂದ್ರ ಮುಂಡರಗಿ, ರಿಚರ್ಡ್ ಧರ್ಮದಾಸ್, ಶಶಿಕುಮಾರ ಮುಂಡರಗಿ, ರಾಮಚಂದ್ರ ಮುಂಡರಗಿ ಉಪಸ್ಥಿತರಿದ್ದರು.