ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವು RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಸಂಬಂಧಿತ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಕರ್ತವ್ಯ ಲೋಪ, ನಿರ್ಲಕ್ಷ್ಯ: ಈ ದುರಂತಕ್ಕೆ KSCA, DNA, RCB ಹಾಗೂ ಪೊಲೀಸರು ನೇರ ಹೊಣೆದಾರರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮ ಆಯೋಜನೆಯು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ, ಎಲ್ಲ ಸಂಘಟನೆಗಳು ಸೇರಿ ನಿರ್ಲಕ್ಷ್ಯತೆಯಿಂದ ಕಾರ್ಯಕ್ರಮ ಮುಂದುವರಿಸಿದ್ದಾರೆ.
ಭದ್ರತಾ ವೈಫಲ್ಯ: ಕ್ರೀಡಾಂಗಣದಲ್ಲಿ ಕೇವಲ 79 ಪೊಲೀಸರನ್ನೇ ನಿಯೋಜಿಸಲಾಗಿತ್ತು. ಹೊರಗೆ ಯಾವುದೇ ಭದ್ರತೆ ಇರಲಿಲ್ಲ. ಆ್ಯಂಬುಲೆನ್ಸ್ ವ್ಯವಸ್ಥೆಯೂ ಇರಲಿಲ್ಲ. ಇದು ತೀವ್ರ ವೈಫಲ್ಯಕ್ಕೆ ಕಾರಣವಾಗಿದೆ.
ಪೊಲೀಸರು ತಡವಾಗಿ ಪ್ರತಿಕ್ರಿಯೆ: ಕಾಲ್ತುಳಿತ 3.25ರ ಹೊತ್ತಿಗೆ ಆರಂಭವಾದರೂ, ನಗರ ಪೊಲೀಸ್ ಆಯುಕ್ತರಿಗೆ 5.30ರವರೆಗೂ ಮಾಹಿತಿ ತಲುಪಿರಲಿಲ್ಲ. ಜಂಟಿ ಪೊಲೀಸ್ ಆಯುಕ್ತರು 4 ಗಂಟೆಗೆ ಸ್ಥಳಕ್ಕೆ ಆಗಮಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ ಕ್ರಮ: ವರದಿಯನ್ನು ವಿಧಾನಸೌಧದಲ್ಲಿ ಸಿಎಂ ಅವರಿಗೆ ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ.