ಸಿನಿರಂಗದ ಹಾಟ್ ಟಾಪಿಕ್ ಇದೀಗ ಒಂದೇ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವೈಭವಶಾಲಿ ವಿವಾಹ ನಡೆಯಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ಧತೆಗಳು ಆರಂಭಗೊಂಡಿವೆ ಎನ್ನುವ ಕೆಲವು ದೃಶ್ಯಗಳು ವೈರಲ್ ಆಗಿವೆ.
ಈ ಚರ್ಚೆಯ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಅಂತಾರಾಷ್ಟ್ರೀಯ OTT ದೈತ್ಯ Netflix, ಮದುವೆಯ ಎಕ್ಸ್‌ಕ್ಲೂಸಿವ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ₹60 ಕೋಟಿ ಆಫರ್ ನೀಡಿದೆಯೆಂದು ವರದಿಯಾಗಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಕ್ಷಣಗಳನ್ನು ಜಾಗತಿಕ ಡಿಜಿಟಲ್ ಕಂಟೆಂಟ್ ಆಗಿ ಪರಿವರ್ತಿಸುವ OTT ತಂತ್ರದ ಭಾಗವಾಗಿಯೇ ಈ ಪ್ರಸ್ತಾಪ ಬಂದಿತ್ತು ಎನ್ನಲಾಗಿದೆ.
ಆದರೆ, ದಂಪತಿ ಈ ಆಫರ್‌ಗೆ ಸ್ಪಷ್ಟ ನಿರಾಕರಣೆ ನೀಡಿದ್ದಾರೆ. “ವಿವಾಹ ನಮ್ಮ ಖಾಸಗಿ ಕ್ಷಣ. ಅದನ್ನು ಕಮರ್ಷಿಯಲ್ ಕಂಟೆಂಟ್ ಆಗಿ ರೂಪಿಸುವ ಉದ್ದೇಶ ಇಲ್ಲ” ಎಂಬ ನಿಲುವು ಅವರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಒಮ್ಮೆ ಸ್ಟ್ರೀಮಿಂಗ್ ಹಕ್ಕು ನೀಡಿದರೆ ಅನೇಕ ಕಾನೂನು ಷರತ್ತುಗಳು, ಚಿತ್ರೀಕರಣದ ನಿಯಂತ್ರಣ ಹಾಗೂ ಅತಿಥಿಗಳ ಮೇಲೆ ನಿಯಮಗಳು ಅನಿವಾರ್ಯವಾಗುತ್ತವೆ. ಈ ಹಿನ್ನೆಲೆ ₹60 ಕೋಟಿ ಮೊತ್ತವೂ ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಹಿಂದೆ ನಯನತಾರಾ-ವಿಘ್ನೇಶ್ ಶಿವಂ ವಿವಾಹದ ಸ್ಟ್ರೀಮಿಂಗ್ ಹಕ್ಕುಗಳನ್ನು Netflix ಪಡೆದುಕೊಂಡು ಸಾಕ್ಷ್ಯಚಿತ್ರವಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾನೂನು ವಿವಾದಗಳು ಮತ್ತು ವಿಳಂಬ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಅನುಭವವೂ ವಿಜಯ್–ರಶ್ಮಿಕಾ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗುತ್ತಿದೆ.
ಉದಯಪುರ ಅರಮನೆ ಮದುವೆ ವದಂತಿ ಅಧಿಕೃತವಾಗುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಒಂದು ವಿಷಯ ಸ್ಪಷ್ಟ – ಈ ಸ್ಟಾರ್ ಜೋಡಿ ತಮ್ಮ ಖಾಸಗಿತನದ ವಿಚಾರದಲ್ಲಿ ಯಾವುದೇ ರಾಜಿ ಮಾಡಲು ಸಿದ್ಧರಿಲ್ಲ.



