ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಮುಂಡರಗಿ-ಹಡಗಲಿ-ಹರಪನಹಳ್ಳಿ ಹೊಸ ರೈಲು ಮಾರ್ಗ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಚಿವ ವಿ.ಸೋಮಣ್ಣ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿವರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಂಡರಗಿ ತಾಲೂಕಾ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ದೇಸಾಯಿಯವರು ನವದೆಹಲಿಯಲ್ಲಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಬಸವರಾಜ ದೇಸಾಯಿ, ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ರೈಲ್ವೆ ಮಾರ್ಗವನ್ನು ಬ್ರಿಟಿಷರ ಆಳ್ವಿಕೆಯಲ್ಲಿಯೇ ಸಮೀಕ್ಷೆ ಮಾಡಲಾಗಿತ್ತು.
ಸ್ವಾತಂತ್ರ‍್ಯದ ನಂತರ ಈ ಯೋಜನೆ ನಿಷ್ಕಿçಯವಾಗಿದೆ. ಈ ರೈಲು ಮಾರ್ಗ ಅನುಷ್ಠಾನಗೊಂಡರೆ ಉತ್ತರ ಭಾರತವನ್ನು ಬಾಗಲಕೋಟೆ ಮೂಲಕ ಸಂಪರ್ಕಿಸುತ್ತದೆ ಮತ್ತು ಬೆಂಗಳೂರಿನಿಂದ ದೆಹಲಿಗೆ ತಲುಪುವ ಹತ್ತಿರದ ಮಾರ್ಗವಾಗಿದೆ. ಈ ಮಾರ್ಗವು ಪ್ರಯಾಣಿಕರ ಸಮಯ ಮತ್ತು ಹಣವನ್ನು ಉಳಿಸುತ್ತದೆ. ಈ ಮಾರ್ಗವು ವಾಣಿಜ್ಯಕವಾಗಿಯೂ ಸದೃಢವಾಗಿದೆ ಎಂದರು.
ವಿಶ್ವ ಪರಂಪರೆಯ ತಾಣಗಳಾದ ಹಂಪಿ, ಬಾದಾಮಿ ಮತ್ತು ವಿಶ್ವವಿಖ್ಯಾತ ಗೋಲಗುಂಬಜ್‌ಗೆ ಭೇಟಿ ನೀಡಲ, ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಗುತ್ತದೆ ಎಂದು ಮನವಿ ಪತ್ರದ ಮೂಲಕ ವಿನಂತಿಸಿದರು.