ಬೀದರ್: ಕೇಂದ್ರ ಸರ್ಕಾರದ ಅನ್ಯಾಯದ ಕಾರಣದಿಂದಲೇ ರಾಜ್ಯಕ್ಕೆ ಹೆಚ್ಚಿನ ಸಾಲದ ಹೊರೆ ಬಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್ 2026 ಕುರಿತು ಬಿಜೆಪಿಯವರು ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರ್ಕಾರವನ್ನು “ಸಾಲಾರಾಮಯ್ಯ” ಎಂದು ವ್ಯಂಗ್ಯ ಮಾಡಿದ ಬಿಜೆಪಿ ನಾಯಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಸುಮಾರು ₹80 ಸಾವಿರ ಕೋಟಿ ರೂಪಾಯಿ ಪಾಲನ್ನು ಇನ್ನೂ ನೀಡಿಲ್ಲ. ಅದರಿಂದಲೇ ರಾಜ್ಯಕ್ಕೆ ಸಾಲದ ಒತ್ತಡ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ಜೊತೆಗೆ ಎಎಒ ಯೋಜನೆಯಲ್ಲಿ ಕೇಂದ್ರದ ಪಾಲಾದ ₹15 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯವೇ ನೀಡಿದೆ ಎಂದು ತಿಳಿಸಿದರು.
ಅದೇ ರೀತಿ ಪಂಚಾಯಿತಿಗಳಿಗೆ ನೀಡಬೇಕಾದ 15ನೇ ಹಣಕಾಸು ಆಯೋಗದ ಅನುದಾನ ಕೂಡ ಕೇಂದ್ರದಿಂದ ಬಂದಿಲ್ಲ ಎಂದು ಅವರು ಹೇಳಿದರು. ಕೇಂದ್ರದ ಹಲವಾರು ಯೋಜನೆಗಳಿಗೆ ರಾಜ್ಯವೇ ಹಣ ನೀಡುತ್ತಿದೆ. ಆದರೆ ರಾಜ್ಯ ಸಾಲ ಮಾಡಿದೆ ಎಂಬುದನ್ನು ಮಾತ್ರ ಬಿಜೆಪಿ ಟೀಕಿಸುತ್ತಿದೆ ಎಂದು ಅವರು ಆರೋಪಿಸಿದರು.
ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಾಲದ ವಿಚಾರವನ್ನೂ ಪ್ರಸ್ತಾಪಿಸಿ, ದೇಶ ನಡೆಸಲು ಕೇಂದ್ರ ಸರ್ಕಾರವೂ ಸಾಲ ಮಾಡುತ್ತಿದೆ ಎಂದು ಹೇಳಿದರು. “ಮೋದಿಯವರು ಸುಮಾರು ₹200 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ದೇಶ ನಡೆಸಲು ಸಾಲ ಮಾಡುವುದು ತಪ್ಪಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
ಇದರ ಜೊತೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಆರೋಪ ಮಾಡಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, “ಅವರು ದಿನವೂ ಗೃಹ ಸಚಿವ ಅಮಿತ್ ಶಾ ಅವರ ಪಕ್ಕದಲ್ಲೇ ಕೂತಿರುತ್ತಾರೆ. ತನಿಖೆ ನಡೆಸಲು ಒತ್ತಾಯ ಮಾಡಲಿ, ಸಾಕ್ಷಿ ನೀಡಲಿ. ಹಿಟ್ ಅಂಡ್ ರನ್ ರಾಜಕಾರಣ ಅವರಿಗೆ ಗೌರವ ತರುವುದಿಲ್ಲ” ಎಂದು ಹೇಳಿದರು.
ಬಿಜೆಪಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಕಡಿತವಾಗಿದೆ ಎಂದು ಆರೋಪಿಸಿರುವ ವಿಚಾರಕ್ಕೂ ಅವರು ತಿರುಗೇಟು ನೀಡಿದರು. ಬಿಹಾರದಲ್ಲಿ ದೊಡ್ಡ ಮೊತ್ತದ ಘೋಷಣೆ ಮಾಡಿದರೆ ಅದನ್ನು ಮಾಸ್ಟರ್ ಸ್ಟ್ರೋಕ್ ಎಂದು ಹೊಗಳುತ್ತಾರೆ. ಆದರೆ ಕರ್ನಾಟಕದಲ್ಲಿ ಜನರಿಗೆ ಸಹಾಯ ಮಾಡುವ ಯೋಜನೆಗಳನ್ನು ಟೀಕಿಸುತ್ತಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ₹5 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಗ್ಯಾರಂಟಿಗಳಿಂದ ಯಾವ ಯೋಜನೆ ನಿಂತಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಎಂದು ಹೇಳಿರುವ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಖರ್ಗೆ, “ಮುಂದಿನ ಬಜೆಟ್ ಯಾರು ಮಂಡಿಸುತ್ತಾರೆ ಎಂಬುದನ್ನು ಸಿದ್ದರಾಮಯ್ಯ ಅಥವಾ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಸದ್ಯ ಅಂತಹ ಯಾವುದೇ ಚರ್ಚೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.



