ಬೀದರ್: ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಜೀವ ಕಳೆದುಕೊಂಡ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ತಳುಕು ಹಾಕಿಕೊಂಡಿದ್ದು ವಿರೋಧ ಪಕ್ಷ ರಾಜೀನಾಮೆಗೆ ಆಗ್ರಹಿಸುತ್ತಿದೆ.
ಇದರ ಬೆನ್ನಲ್ಲೇ ಪ್ರಕರಣ ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಎಂದು ಸಚಿನ್ ಸಹೋದರಿ ಸುರೇಖಾ ಆರೋಪ ಮಾಡಿದ್ದಾರೆ. ಬೀದರ್ʼ ನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಉಳಿದಿಲ್ಲ. ಸಿಬಿಐ ತನಿಖೆ ಮಾಡಿದರೆ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿದೆ ಎಂದರು.
ಇನ್ನೂ ಡೆತ್ ನೋಟ್ನಲ್ಲಿ ಉಲ್ಲೇಖವಾದ ಆರೋಪಿಗಳನ್ನು ಈವರೆಗೆ ತನಿಖೆಗೆ ಒಳಪಡಿಸಿಲ್ಲ. ತನಿಖಾಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಇಲ್ಲಿವರೆಗೆ ತನಿಖಾಧಿಕಾರಿಗಳು ಯಾವುದೇ ಮಾಹಿತಿ ಕೊಟ್ಟಿಲ್ಲ. ಎಫ್ಎಸ್ಎಲ್ ವರದಿ, ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆಯಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.