ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಡಿ. 10ರಂದು ಬೆಳಗಾವಿ ಚಲೋ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೈತರು ಪ್ರಸಕ್ತ ಸಾಲಿನಲ್ಲಿ ಉತ್ತಮ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಮಾತ್ರ ಸಿಗುತ್ತಿಲ್ಲ. ಈ ಕುರಿತು ಹಲವಾರು ಬಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಡಿಸೆಂಬರ್ 10ರಂದು ಬೆಳಗಾವಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ಮುಖಂಡ ಶಂಕರಗೌಡ ಜಯನಗೌಡ್ರ ತಿಳಿಸಿದರು.

Advertisement

ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾವೇರಿಯ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಂಡು 24 ಟಿ.ಎಂ.ಸಿ ನೀರನ್ನು ಉಳಿತಾಯ ಮಾಡಿ ರಾಜ್ಯದ ಅಭಿವೃದ್ಧಿಯ ದಿಕ್ಕಿನಲ್ಲಿ ಬಳಕೆ ಮಾಡಬೇಕಿದೆ. ಈಗ ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ. ಕರ್ನಾಟಕದ ಹಕ್ಕನ್ನು ಎತ್ತಿ ಹಿಡಿಯಲಾಗಿದೆ. ಇಲ್ಲಿಯೂ ಕೂಡ ಕೇಂದ್ರ ಪರಿಸರ ಇಲಾಖೆ ಅನುಮತಿ ಇಲ್ಲವೆಂದು ಕಾದು ಕುಳಿತುಕೊಳ್ಳುವುದು ಸರಿಯಲ್ಲ. ಬಹುಬೇಗ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ಎಂ.ಎಸ್.ಪಿ ಶಾಸನಬದ್ಧಗೊಳಿಸಲು ಕೇಂದ್ರ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರದೇ ಇರುವುದು ರೈತರ ಮಟ್ಟಿಗೆ ದುರ್ದೈವದ ಸಂಗತಿ. ಡಾ. ಎಮ್.ಎಸ್. ಸ್ವಾಮಿನಾಥನ್ ಎಂ.ಎಸ್.ಪಿ ಸಿ2+50 ಸೂತ್ರವನ್ನು ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಿ 26 ವರ್ಷವಾಗಿದೆ. ಆದರೂ ಯಾವುದೇ ತೀರ್ಮಾನ ಮಾಡದೆ ಇರುವುದರಿಂದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ತಾಲೂಕಾಧ್ಯಕ್ಷ ಮಂಜುನಾಥ ಧ್ರುವಕುಮಾರ ಹೂಗಾರ, ಆದೇಶ ಚೆನ್ನಪ್ಪ ಹುಲಗೂರ, ಚೆನ್ನಪ್ಪ ಷಣ್ಮುಖಿ, ಬಸವರಾಜ ಉಪಸ್ಥಿತರಿದ್ದರು.

ಸರ್ಕಾರ ರೈತರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ. ಆದರೆ, ಆ ಯೋಜನೆಗಳು ಫಲಾನುಭವಿಗಳಿಗೆ ತಲುಪುವುದಿಲ್ಲ. ಅಧಿಕಾರಿಗಳು ರೈತರ ಅವಶ್ಯಕತೆಗೆ ತಕ್ಕಂತೆ ಎಂ.ಎಸ್.ಪಿ ತೆರೆಯುವುದಿಲ್ಲ. ಖರೀದಿ ಕೇಂದ್ರದಲ್ಲಿ ವೈಜ್ಞಾನಿಕತೆ ಬಗ್ಗೆ ಪ್ರಶ್ನಿಸುತ್ತಾರೆ. ಇದರಿಂದ ರೈತ ಸಂಕಷ್ಟದ ಸ್ಥಿತಿಯಲ್ಲಿದ್ದು, ಸರ್ಕಾರ ರೈತರ ಹಿತ ಕಾಯಬೇಕಿದೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
-ಸುರೇಶ ಸಿಂದಗಿ.
ರೈತ ಮುಖಂಡ.


Spread the love

LEAVE A REPLY

Please enter your comment!
Please enter your name here