2019ರ ಸಾಲಿನ ರಾಜ್ಯ ಚಲನಚಿತ್ರ ಜೀವಮಾನ ಸಾಧನೆ, ಸಾಹಿತ್ಯ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪ್ರಕಟ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ. ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಡಾ. ವಿಷ್ಣುವರ್ಧನ್ ಪ್ರಶಸ್ತಿ, ವಾರ್ಷಿಕ ಸಾಹಿತ್ಯ ಮತ್ತು ಕಿರುಚಿತ್ರ ಪ್ರಶಸ್ತಿಗಳ ಪುರಸ್ಕೃತರನ್ನು ಸರ್ಕಾರ ಪ್ರಕಟಿಸಿದೆ.

Advertisement

ನವೆಂಬರ್ 3ರಂದು ಮೈಸೂರಿನಲ್ಲಿ ನಡೆಯಲಿರುವ 2018 ಮತ್ತು 2019ರ ಕ್ಯಾಲೆಂಡರ್ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ. ರಾಜಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಎನ್.ಆರ್. ನಂಜುಂಡೇಗೌಡ, ಮತ್ತು ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ದೇಶಕ ರಿಚಾರ್ಡ್ ಕಾಸ್ಟೆಲಿನೋ ಆಯ್ಕೆಯಾಗಿದ್ದಾರೆ. ಈ ಮೂರು ಪ್ರಶಸ್ತಿಗಳು ತಲಾ ₹5 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿವೆ.

2019ರ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್. ಹಡಗಲಿ ನಿರ್ದೇಶನದ ಗುಳೆ’ ಕಿರುಚಿತ್ರ ಆಯ್ಕೆಯಾಗಿದೆ. ಮನೋಹರ್ ಎಸ್. ಅಯ್ಯರ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತಲಾ ₹25 ಸಾವಿರ ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಘುನಾಥ ಚ. ಹ

2019ರ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಘುನಾಥ ಚ. ಹ ಬರೆದಿರುವ ಬೆಳ್ಳಿ ತೊರೆ’ ಸಿನೆಮಾ ಪ್ರಬಂಧಗಳ ಕೃತಿ ಆಯ್ಕೆಯಾಗಿದೆ.
ಅಂಕಿತ ಪುಸ್ತಕ ಪ್ರಕಟಿಸಿರುವ ಈ ಕೃತಿಗೆ ಕೃತಿಕಾರ ಹಾಗೂ ಪ್ರಕಾಶಕರಿಗೆ ತಲಾ ₹20 ಸಾವಿರ ನಗದು ಮತ್ತು 50 ಗ್ರಾಂ ಬೆಳ್ಳಿ ಪದಕ ನೀಡಲಾಗುತ್ತದೆ.

ಉಮಾಶ್ರೀ

ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಪ್ರತಿಭಾವಂತ ನಟಿ, ನಿರ್ದೇಶಕಿ ಹಾಗೂ ರಾಜಕಾರಣಿಯಾಗಿದ್ದಾರೆ. ಬಾಲ್ಯದಲ್ಲಿಯೇ ರಂಗಭೂಮಿಯಲ್ಲಿ ಅಭಿನಯ ಪ್ರಾರಂಭಿಸಿದ ಇವರು 1980ರ ದಶಕದಲ್ಲಿ ಅನುಭವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಉಮಾಶ್ರೀ, ಕನ್ನಡ ಚಿತ್ರರಂಗದ ದಂತಕಥೆಗಳಲ್ಲಿ ಒಬ್ಬರು. ಇವರು ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಹಾಗೂ ಗುಲಾಬಿ ಟಾಕೀಸ್’ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಎನ್.ಆರ್. ನಂಜುಂಡೇಗೌಡ

ಎನ್.ಆರ್. ನಂಜುಂಡೇಗೌಡ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಾಗಿದ್ದು, ನಟ ಮತ್ತು ಸಂಭಾಷಣಾ ಬರಹಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಂಗಭೂಮಿ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಇವರು ಚಲನಚಿತ್ರ ಸಂಬಂಧಿತ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿಗಳ ಸದಸ್ಯರಾಗಿದ್ದಾರೆ. 1989ರಲ್ಲಿ ಸಂಕ್ರಾಂತಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನ ತಂದವರು. ಇವರ ಜೀವಮಾನ ಸಾಧನೆಯನ್ನು ಪರಿಗಣಿಸಿ 2019 ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಿಚಾರ್ಡ್ ಕಾಸ್ಟೆಲಿನೋ

ಮಂಗಳೂರು ಮೂಲದ ಪ್ರಸಿದ್ಧ ನಿರ್ದೇಶಕ ರಿಚಾರ್ಡ್ ಕಾಸ್ಟೆಲಿನೋ ತುಳು, ಕೊಂಕಣಿ, ಕೊಡವ ಮತ್ತು ಕನ್ನಡ ಚಿತ್ರರಂಗಗಳಲ್ಲಿ ಪ್ರಮುಖ ಸೇವೆ ಸಲ್ಲಿಸಿದ್ದಾರೆ. 1990ರ ದಶಕದಲ್ಲಿ ಸೆಪ್ಟೆಂಬರ್ 8’ ಚಿತ್ರವನ್ನು ಕೇವಲ 24 ಗಂಟೆಗಳಲ್ಲಿ ಪೂರ್ಣಗೊಳಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಸಾಮಾಜಿಕ ವಿಷಯಗಳು, ಸಾಂಸ್ಕೃತಿಕ ಬೆಳವಣಿಗೆಗಳು ಮತ್ತು ಮಾನವೀಯ ಭಾವನೆಗಳನ್ನು ಆಧರಿಸಿದ ಇವರ ಚಿತ್ರಗಳು ಗಮನಾರ್ಹವಾಗಿವೆ. ರಾಜ್ಯ ಸರ್ಕಾರವು ಇವರ ಸಾಧನೆಯನ್ನು ಪರಿಗಣಿಸಿ 2019ರ ಡಾ. ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.


Spread the love

LEAVE A REPLY

Please enter your comment!
Please enter your name here