ಬಾಗಲಕೋಟೆ;- ಲೋಕಸಭೆ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲ್ಲ. ಬದಲಾಗಿ ಆಪರೇಶನ್ ಹಸ್ತ ನಡೆಯುತ್ತಿದೆ. ಬರದ ನಡುವೆ ಕೈ ನಾಯಕರು ಕುರ್ಚಿಗಾಗಿ ಕಸರತ್ತು ನಡೆಸಿದ್ದಾರೆ. ನಾವೇನು ಸರ್ಕಾರ ಕೆಡವಲ್ಲ. ಅದು ತಾನಾಗಿಯೇ ಬೀಳಲಿದೆ ಎಂದರು.
ಸರ್ಕಾರ ಬೀಳೋದನ್ನೇ ನಾವು ಕಾಯುತ್ತಿಲ್ಲ. ರಾಜ್ಯದ ಜನತೆಯ ಪರವಾಗಿ ನಮ್ಮ ಪಕ್ಷ ಇದೆ. ಅಧಿಕಾರಕ್ಕಾಗಿ ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಸರ್ಕಾರ ಪತನವಾದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ. ಬರ ಕಾಮಗಾರಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ರೈತರ ಶಾಪದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಕಟೀಲ್ ತಿಳಿಸಿದರು.
ವಿಪಕ್ಷ ನಾಯಕನ ಆಯ್ಕೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ಕಾದು ನೋಡೋಣ, ಹೇಗಾದರೂ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಆ ಬಗ್ಗೆ ಯೋಚಿಸೋಣ ಎಂದು ನಸುನಕ್ಕರು.
ಇದೇ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಕಟೀಲ್ ಪ್ರತಿಕ್ರಿಯೆ ನೀಡದೇ ಮೌನವಹಿಸಿದರು.