ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಖಾಸಗಿ ಆಸ್ತಿಗಳು ವಕ್ಫ್ ಮಂಡಳಿ ಹೆಸರಿಗೆ ಏಕಾಏಕಿ ನೋಂದಣಿ ಆಗುತ್ತಿರುವುದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರ ಜಮೀನುಗಳು ಮಾತ್ರವಲ್ಲದೆ ಮಠ-ಮಾನ್ಯಗಳ ಆಸ್ತಿಗಳು ಸಹ ವಕ್ಫ್ ಮಂಡಳಿ ಹೆಸರಿಗೆ ನೋಂದಣಿಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ಓಲೈಕೆ ರಾಜಕಾರಣ ಮಾಡುವುದಕ್ಕೆ ಹೆಸರಾಗಿರುವ ಕಾಂಗ್ರೆಸ್ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ. ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ಶುರುವಾಗಿದೆ. ಜನರು ಉಚಿತ ಕೊಡುಗೆಗಳಿಗೆ ಆಸೆಪಟ್ಟು ಕಾಂಗ್ರೆಸ್ ಸರ್ಕಾರವನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕಾಗಿ ಈಗ ಆಸ್ತಿ-ಪಾಸ್ತಿಗಳನ್ನೆಲ್ಲ ವಕ್ಫ್ ಮಂಡಳಿಗೆ ವರ್ಗಾಯಿಸುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಷಾದಕರ.
ರಾಜ್ಯ ಸರ್ಕಾರ ಕೂಡಲೇ ವಿವಾದಿತ ಜಮೀನುಗಳಲ್ಲಿ ವಕ್ಫ್ ಹೆಸರನ್ನು ತೆಗೆದುಹಾಕಿ ಮಾಲೀಕರಿಗೆ ಅವುಗಳನ್ನು ಮರಳಿಸಬೇಕಿದೆ. ವಕ್ಫ್ ವಿವಾದದಿಂದ ರಾಜ್ಯ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದ್ದು, ವಕ್ಫ್ ಸಚಿವ ಜಮೀರ್ ಅಹ್ಮದ್ ಹಾಗೂ ಸಿಎಂ ಸಿದ್ಧರಾಮಯ್ಯ ತಮ್ಮ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.