ಬೆಂಗಳೂರು: ಮದ್ಯಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಏಕಾಏಕಿ ಬಿಯರ್ ದರ ಏರಿಸಲು ಮುಂದಾಗಿದ್ದು, ಎಣ್ಣೆ ಪ್ರಿಯರ ಕಣ್ಣು ಕೆಂಪಾಗಿಸಿದೆ. ಹೌದು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡ ಹತ್ತರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿರುವ ಬಗ್ಗೆ ವರದಿಯಾಗಿದ್ದು, ಇದು ಜಾರಿಗೆ ಬಂದರೆ ಬಿಯರ್ ದರ ಮತ್ತಷ್ಟು ದುಬಾರಿಯಾಗಲಿದೆ.
ಸದ್ಯ ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 205 ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್ಗೆ 5 ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಸ್ತವಾಗಿರಲಿದೆ.